ಬಂಟ್ವಾಳ: ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಪ್ರತಿಭಟನಾ ಪ್ರದರ್ಶನ ಗುರುವಾರ ಬೆಳಗ್ಗೆ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ನಡೆಯಿತು.
ಈ ಸಂದರ್ಭ ಮಾತನಾಡಿದ ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರ್ಕಾರ ತನ್ನ ನೀತಿಗಳನ್ನು ಏಕಪಕ್ಷೀಯವಾಗಿ ರೈತ, ಕಾರ್ಮಿಕ ವಿರೋಧಿಯಾಗಿ ಹೊರತರುತ್ತಿದ್ದು, ಇದರಿಂದ ಬದುಕು ದುಸ್ತರವಾಗಿದೆ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುವ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ ಮಾಡಲೂ ಜನರು ಹಿಂಜರಿಯುವಂತೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ದೂರಿದರು. ಪ್ರಮುಖರಾದ ಸುರೇಶ್ ಕುಮಾರ್, ರಾಮಣ್ಣ ವಿಟ್ಲ, ತುಳಸೀದಾಸ್ ವಿಟ್ಲ, ಬಿ.ಶೇಖರ್, ಭಾರತಿ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.