ಬಂಟ್ವಾಳ : ತಪ್ಪುಗಳು ಮನುಷ್ಯ ಜೀವನದಲ್ಲಿ ಸಹಜ. ಆದರೆ ತಪ್ಪುಗಳನ್ನು ಪರಸ್ಪರ ಕ್ಷಮಿಸಿ, ತಿದ್ದಿ ಬಾಳುವುದೇ ಮನುಷ್ಯ ಜೀವನ ಎಂದು ವಂದನೀಯ ಫಾದರ್ ಅರ್ಚಿಬಾಲ್ಡ್ ಗೊನ್ಸಾಲ್ವಿಸ್ ರವರು ಹೇಳಿದರು.
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನ.22ರಂದು ನಡೆದ “ಸಹೋದರತ್ವದ ಭಾನುವಾರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಮುರಿದ ಮನಸ್ಸುಗಳು ಒಂದಾಗಿ ಸಹೋದರತ್ವದಿಂದ ಬಾಳುವುದೇ ಸಹೋದರತ್ವದ ಭಾನುವಾರದ ವಿಶೇಷತೆ ಎಂದು ವ್ಯಾಖ್ಯಾನಿಸಿದರು. ಮಂಗಳೂರು ಧರ್ಮ ಪ್ರಾಂತ್ಯದ ಶ್ರೇಷ್ಟ ಧರ್ಮಗುರುಗಳಾದ ಮೊನ್ಸಿಂಜೊರ್ ಮ್ಯಾಕ್ಸಿಂ ನೊರೊನ್ಹಾ ರವರು ಪ್ರಧಾನ ಧರ್ಮಗುರುಗಳಾಗಿ ಬಲಿಪೂಜೆಯನ್ನು ನಡೆಸಿದರು.
ಮಂಗಳೂರು ಕಥೊಲಿಕ್ ಸಭಾದ ನಿರ್ದೇಶಕರಾದ ಫಾದರ್ ಮ್ಯಾಥ್ಯು ವಾಸ್ ಮಾತನಾಡಿ, ಶಿಸ್ತು, ಭಕ್ತಿ, ವಿಶ್ವಾಸ ಮತ್ತು ಪ್ರೀತಿ ಸೂರಿಕುಮೇರು ಚರ್ಚ್ ನಲ್ಲಿ ಎದ್ದು ಕಾಣುತ್ತಿದೆ. ಈ ಚರ್ಚ್ ಮಂಗಳೂರು ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ ಗಳಿಗೆ ಮಾದರಿಯಾಗಲಿ ಎಂದರು. ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು.ಇದೇ ಸಂದರ್ಭ ಸೂರಿಕುಮೇರು ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರ ಜನ್ಮ ದಿನವನ್ನು ಚರ್ಚ್ ಪಾಲನಾ ಸಮಿತಿಯವರ ವತಿಯಿಂದ ಆಚರಿಸಲಾಯಿತು.
ಬಲಿಪೂಜೆಗೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಕಾರ್ಯಕಾರಿ ಸಮಿತಿಯವರು ಕೋವಿಡ್-19 ರ ಮುನ್ನೆಚ್ಚರಿಕೆಯ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ಮಾಡಲಾಯಿತು.ಸೂರಿಕುಮೇರು ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ ಸ್ವಾಗತಿಸಿದರು.ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಪಿರೇರಾ ವಂದಿಸಿದರು. ಕಾರ್ಯದರ್ಶಿ ಮೇರಿ ಡಿಸೋಜಾವರು ಕಾರ್ಯಕ್ರಮ ನಿರೂಪಿಸಿದರು.