ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಬಂಟ್ವಾಳ ಸಹಯೋಗದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಕೋವಿಡ್ 19 ಜೀವ ಮತ್ತು ಜೀವನ ಕಾರ್ಯಕ್ರಮವನ್ನು ಸೋಮವಾರ ಬಿ.ಸಿ.ರೋಡಿನ ತಾಪಂ ಸಭಾಂಗಣದಲ್ಲಿ ನಡೆಯಿತು. ಇದೇ ವೇಳೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ವಿಚಾರವಿರುವ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪ್ರಧಾನಮಂತ್ರಿ ಆಶಯದಂತೆ 2023ರೊಳಗೆ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಕಾರ್ಯರೂಪಕ್ಕೆ ತರಲು ಹಾಗೂ ಪ್ರತಿಯೊಂದು ಭಾಗಗಳಿಗೂ ಇದನ್ನು ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದು ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಜಿಪಂ ಸದಸ್ಯ ರವಿಂದ್ರ ಕಂಬಳಿ, ಜಲಜೀವನ ಮಿಷನ್ ನಡಿ ನಮ್ಮ ಜಿಪಂ ಕ್ಷೇತ್ರಗಳಿಗೆ ಚಿಕ್ಕಾಸೂ ಅನುದಾನ ನೀಡಿಲ್ಲ ಎಂದು ದೂರಿದರು. ಇದಕ್ಕೆ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮತ್ತು ಜಯಶ್ರೀ ಕೋಡಂದೂರು ದನಿಗೂಡಿಸಿದರು. ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್, ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಂಗಪ್ಪ ಬಂಗೇರ, ಕೆ.ರವೀಂದ್ರ ಕಂಬಳಿ, ಕಮಲಾಕ್ಷಿ ಕೆ. ಪೂಜಾರಿ, ಜಯಶ್ರೀ ಕೋಡಂದೂರು, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜೀವನ ಕೌಶಲ್ಯ ತರಬೇತುದಾರ ಶ್ರೀಕಾಂತ್ ಪೂಜಾರಿ ಬಿರಾವು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ ಸಾಲ್ಯಾನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ವ್ಯವಸ್ಥಾಪಕ ಪ್ರಸಾದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೊಂಬಯ್ಯ ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.