ಬಂಟ್ವಾಳ ಪುರಸಭೆಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷರಾಗಿ ಮಹಮ್ಮದ್ ಶರೀಫ್ ಮತ್ತು ಉಪಾಧ್ಯಕ್ಷರಾಗಿ ಜೆಸಿಂತಾ ಡಿಸೋಜ ಬುಧವಾರ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಎರಡು ವರ್ಷಗಳ ಬಳಿಕ ಜನಪ್ರತಿನಿಧಿಗಳ ಆಡಳಿತ ಮತ್ತೆ ಆರಂಭಗೊಂಡಿದೆ. ಒಟ್ಟು 27 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11 ಮತ್ತು ಎಸ್.ಡಿ.ಪಿ.ಐ. 4 ಸ್ಥಾನ ಗಳಿಸಿದ್ದು, ಕಾಂಗ್ರೆಸ್ ಪಕ್ಷದ ಮಹಮ್ಮದ್ ಶರೀಫ್ ಮತ್ತು ಜೆಸಿಂತಾ ಡಿಸೋಜ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಇವರಿಗೆ ಎಸ್.ಡಿ.ಪಿ.ಐ. ಬೆಂಬಲ ನೀಡಿತ್ತು.
ಮಾಜಿ ಸಚಿವ ಬಿ.ರಮಾನಾಥ ರೈ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದ ಶರೀಫ್, ಪುರಸಭೆಯನ್ನು ರಮಾನಾಥ ರೈ ಮಾರ್ಗದರ್ಶನದಲ್ಲಿ ಮಾದರಿ ಯನ್ನಾಗಿರುವ ಭರವಸೆ ನೀಡಿದರು.
ಶುಭ ಹಾರೈಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಂಟ್ವಾಳ ಪುರಸಭೆಯಲ್ಲಿ ಯಾವುದೇ ಕೆಲಸಗಳಾಗದೆ ನಿಸ್ತೇಜ ಸ್ಥಿತಿಗೆ ಬಂದಿದ್ದು, ತಾನು ಶಾಸಕನಾಗಿದ್ದಾಗ, ಸಮಗ್ರ ಕುಡಿಯುವ ನೀರಿನ ಯೋಜನೆ, ರಸ್ತೆ ಅಭಿವೃದ್ಧಿ, ಪಾರ್ಕ್ ಸಹಿತ ಹಲವು ಅಭಿವೃದ್ಧಿ ಕಾರ್ಯಗಳು ಪುರಸಭೆಗೆ ಅನುದಾನ ನೀಡಿದ್ದನ್ನು ಸ್ಮರಿಸಿದರು. ಮೇಲ್ಕಾರ್ ಸೌಂದರ್ಯವೃದ್ಧಿ, ಬೈಪಾಸ್ ರಸ್ತೆ ನಿರ್ಮಾಣವಾದದ್ದನ್ನು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಪಿ.ರಾಮಕೃಷ್ಣ ಆಳ್ವ, ಜೋಸ್ಫಿನ್ ಡಿಸೋಜ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ತಾಪಂ ಸದಸ್ಯ ಸಂಜೀವ ಪೂಜಾರಿ, ಪುರಸಭೆ ಸದಸ್ಯರಾದ ಮುನೀಶ್ ಆಲಿ, ಇದ್ರೀಸ್, ಝೀನತ್, ಸಂಶಾದ್, ಜನಾರ್ದನ ಚಂಡ್ತಿಮಾರ್, ವಾಸು ಪೂಜಾರಿ, ಗಂಗಾಧರ್, ಪ್ರಮುಖರಾದ ಪಿ.ಎ.ರಹೀಂ, ವೆಂಕಪ್ಪ ಪೂಜಾರಿ, ಬಿ.ಮೋಹನ್, ಹಾರೂನ್ ರಶೀದ್, ಜಗದೀಶ ಕೊಯ್ಲ, ಪದ್ಮನಾಭ ರೈ, ಚಿತ್ತರಂಜನ್ ಶೆಟ್ಟಿ, ಲೋಕೇಶ್ ಸುವರ್ಣ ಮೊದಲಾದವರು ಆಗಮಿಸಿ ಶುಭ ಕೋರಿದರು. ಪುರಸಭೆ ಸಿಬಂದಿ ರಜಾಕ್ ಸ್ವಾಗತಿಸಿದರು.