ಬಂಟ್ವಾಳ: ಯಕ್ಷಗಾನದ ಹಿರಿಯ ವಿದ್ವಾಂಸ, ಸಂಶೋಧಕ ಡಾ. ಎಂ.ಪ್ರಭಾಕರ ಜೋಷಿಯವರಿಗೆ ಈ ಬಾರಿಯ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಘೋಷಣೆಯಾಗಿದೆ. ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೈಗೊಂಡ ಸೇವೆಯನ್ನು ಗಮನಿಸಿ ಅವರಿಗೆ ಪ್ರಶಸ್ತಿ ನೀಡುವ ಕುರಿತು ಶನಿವಾರ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ವಠಾರದಲ್ಲಿ ನಡೆದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಿ.25ರಂದು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವೇಳೆ ಮುಳಿಯ ತಿಮ್ಮಪ್ಪಯ್ಯ ಅವರ ಪುತ್ರ ಮುಳಿಯ ಗೋಪಾಲಕೃಷ್ಣ ಭಟ್ ಅವರ ಕೃತಿ ಬಿಡುಗಡೆ ಕಾರ್ಯಕ್ರಮವೂ ನಡೆಸುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟ ಅಭಿಮಾನಿಗಳ ಸಂಘದ ಅಧ್ಯಕ್ಷ ಸುದರ್ಶನ ಜೈನ್, ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್, ಪ್ರಮುಖರಾದ ಗಂಗಾಧರ ಭಟ್ ಕೊಳಕೆ, ಬಿ.ಎಂ.ಅಬ್ಬಾಸ್ ಆಲಿ, ಪ್ರೊ.ತುಕಾರಾಮ ಪೂಜಾರಿ, ಪ್ರೊ.ರಾಜಮಣಿ ರಾಮಕುಂಜ, ಕೈಯೂರು ನಾರಾಯಣ ಭಟ್, ರವಿಕುಮಾರ್, ಅಬ್ದುಲ್ ರಹಿಮಾನ್ ಡಿ.ಬಿ, ವಿ.ಸು.ಭಟ್, ಕೃಷ್ಣ ಶರ್ಮ, ಮೋಹನದಾಸ ಕೊಟ್ಟಾರಿ ಮುನ್ನೂರು ಭಾಗವಹಿಸಿದ್ದರು.