ಬಂಟ್ವಾಳ: ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಸಮಿತಿ ಟ್ರಸ್ಟ್ (ರಿ) ವತಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಪಡುಮಲೆ ಕ್ಷೇತ್ರದಲ್ಲಿ ಮುಂದಿನ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಅಂದಾಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಬಂಟ್ವಾಳದ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಬಂಟ್ವಾಳ ತಾಲೂಕಿನ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಹಿಂದಿನ ವಿಚಾರಗಳನ್ನು ಸಭೆಗೆ ವಿವರಿಸಿದರು. ಕ್ಷೇತ್ರದ ಮೊಕ್ತೇಸರ, ಚಿತ್ರನಟ ವಿನೋದ್ ಆಳ್ವ ಸಮಿತಿ ಪ್ರಮುಖರಾದ ಚರಣ್ ಕೆ. ಕ್ಷೇತ್ರದ ಕುರಿತು ಮಾಹಿತಿ ನೀಡಿ, ಎಲ್ಲರ ಸಹಕಾರ ಕೋರಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಪ್ರಮುಖರಾದ ಬೆಳ್ತಂಗಡಿಯ ಯೋಗೀಶ್ ಕುಮಾರ್ ನಡಕ್ಕರ್, ಪುತ್ತೂರಿನ ವಿಜಯಕುಮಾರ್ ಸೊರಕೆ, ಮಂಗಳೂರಿನ ಬಿ.ಪಿ. ದಿವಾಕರ್, ಪಂಜಿಕಲ್ಲು ಗರೋಡಿಯ ಆಡಳಿತದಾರ ಬಿ.ಪ್ರಕಾಶ್ ಜೈನ್ ಉಪಸ್ಥಿತರಿದ್ದರು. ಇದೇ ವೇಳೆ ಮಂಗಳೂರಿನ ಬಿಲ್ಲವ ಸಂಘ (ರಿ) ಊರ್ವ – ಅಶೋಕನಗರ ವತಿಯಿಂದ ಬಿ.ಪಿ.ದಿವಾಕರ್ ನೇತೃತ್ವದಲ್ಲಿ ದೇಣಿಗೆಯನ್ನು ನೀಡಲಾಯಿತು. ಸಭೆಯಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಉಪಸ್ಥಿತರಿದ್ದರು.