ಬಂಟ್ವಾಳ: ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಮಸ್ಯೆ ಸಂಬಂಧ ‘ಪ್ರತ್ಯೇಕ ಮರಳುನೀತಿ’ ಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು ಹಾಗೂ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ದ.ಕ.ಜಿಲ್ಲೆಯ ತುಂಬೆ,ಮಳವೂರು ಡ್ಯಾಂ ಸಹಿತ ಇತರೆಡೆಯಲ್ಲಿ ಶೇಖರಣೆಯಾಗಿರುವ ಮರಳು ತೆರವಿಗೆ ಜಿಲ್ಲಾಧಿಕಾರಿಯವರಿಗೆ ಪೂರ್ಣ ಅಧಿಕಾರ ನೀಡುವುದಲ್ಲದೆ ನಾನ್ -ಸಿಆರ್ ಝಡ್ ವ್ಯಾಪ್ತಿಯಲ್ಲಿ ರಾಜ್ಯ ಮಿನರಲ್ ನಿಗಮಕ್ಕೆ ಸಲ್ಲಿಸಿರುವ 30 ಪ್ರಸ್ತಾವನೆಯನ್ನು ತಕ್ಷಣ ಟೆಂಡರ್ ಕರೆದು ಅನುಮತಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭ ಸಚಿವ ಸಿ.ಸಿ.ಪಾಟೀಲ್, ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಸಂಜೀವ ಮಠಂದೂರು, ಎಸ್.ಅಂಗಾರ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಅವರು ಹಾಜರಿದ್ದರು.