ಸೋಶಿಯಲ್ ಮೀಡಿಯಾ ಸಹಿತ ಸಾರ್ವಜನಿಕರ ಚರ್ಚೆಗೆ ವಸ್ತುವಾಗಿದ್ದ, ಹಲವು ಪ್ರತಿಭಟನೆಗಳಿಗೆ ವೇದಿಕೆಯಾಗಿದ್ದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡಿನಿಂದ ಮಾಣಿವರೆಗಿನ ರಿಪೇರಿ ಕಾರ್ಯ ಕೊನೆಗೂ ಆರಂಭವಾಗಿದೆ. ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ 10 ದಿನಗಳೊಳಗೆ ಸರಿಯಾದ ದುರಸ್ತಿ ಕಾರ್ಯ ನಡೆಸಬೇಕು ಎಂಬ ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನಿಂದಲೇ ದುರಸ್ತಿ ಕಾರ್ಯ ಆರಂಭಗೊಂಡಿತು.
ಆದರೆ ಟ್ರಾಫಿಕ್ ಪೊಲೀಸರಿಗೆ ಈ ಕುರಿತು ಪೂರ್ವಸೂಚನೆ ಇಲ್ಲದ ಕಾರಣ ಸಂಜೆವರೆಗೆ ವಾಹನದಟ್ಟಣೆ ಬಿ.ಸಿ.ರೋಡಿನಿಂದ ಕಲ್ಲಡ್ಕವರೆಗೆ ತಲೆದೋರಿತು. ಪರ್ಯಾಯ ದಾರಿ ಗೊತ್ತಿದ್ದವರು, ಅದನ್ನು ಬಳಸಿದರೆ, ಉಳಿದವರು ಸಾಲಿನಲ್ಲಿ ನಿಂತು ಬಸವಳಿದರು. ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಅಂಬ್ಯುಲೆನ್ಸ್ ಗಳು ಕೂಡ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಬೇಕಾಯಿತು. ಕೊನೆಗೆ ಟ್ರಾಫಿಕ್ ಪೊಲೀಸ್ ಠಾಣೆಯ ಎಸ್ ಐ ರಾಜೇಶ್ ಕೆ.ವಿ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳಾದ ಅವಿನಾಶ್, ಪ್ರಸನ್ನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು,ಹೋಂಗಾಡ್೯ ಸಿಬ್ಬಂದಿಗಳು ರಸ್ತೆಗಿಳಿದು ಹರಸಾಹಸಪಟ್ಟು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾದರು.