ಕೇಂದ್ರ ಸರಕಾರದ ಜನಪರ ಯೋಜನೆಗಳ ಮಾಹಿತಿ ಬ್ಯಾಂಕು ಸೇವೆಗಳ ಕುಂದುಕೊರತೆ ನಿವಾರಣೆ ಅಹವಾಲು ಸ್ವೀಕಾರ ಕಾರ್ಯಕ್ರಮ ಬಿ.ಸಿ ರೋಡ್ ನ ರಂಗೋಲಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.ಈ ಸಂದರ್ಭ ರಾಷ್ಟ್ರಿಕೃತ ಬ್ಯಾಂಕ್ ಗಳ ಅಧಿಕಾರಿಗಳು ಉಪಸ್ಥಿತರಿದ್ದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಗ್ರಾಹಕ ಮತ್ತು ಬ್ಯಾಂಕುಗಳ ನಡುವಿನ ಸಂಬಂಧವೃದ್ಧಿಯಾದರೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನಗಳನ್ನೂ ಸಕಾಲದಲ್ಲಿ ಪಡೆಯಬಹುದು, ಬಂಟ್ವಾಳ ಶಾಸಕರ ಕಚೇರಿ ಬ್ಯಾಂಕ್ ಮತ್ತು ಗ್ರಾಹಕ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ದೇಶಸೇವಕ ಎಂಬ ಮನಸ್ಸಿನಿಂದ ಕೆಲಸ ಮಾಡಿ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಯೋಜನೆಗಳ ಸದುಪಯೋಗಕ್ಕೆ ಕರೆ ನೀಡಿದರು. ಜಿಲ್ಲಾ ತರಬೇತಿ ಕೇಂದ್ರ ಸಹಾಯಕ ನಿರ್ದೇಶಕ ವಿವೇಕಾನಂದ, ಪ್ರಧಾನಮಂತ್ರಿ ಸ್ವಾನಿಧಿ ಅಭಿಯಾನದ ವ್ಯವಸ್ಥಾಪಕಿ ಐರಿನ್, ವೆಂಕಟೇಶ್, ಜಯಂತ್ ಶೆಟ್ಟಿ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ಪ್ರವೀಣ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ, ಬ್ಯಾಂಕುಗಳ ಈಗಿನ ತಂತ್ರಜ್ಞಾನ ಹಾಗೂ ಸರಳವಾಗಿ ಗ್ರಾಹಕರು ಪಡೆಯಬಹುದಾದ ಸೌಲಭ್ಯಗಳ ಕುರಿತು ವಿವರಿಸಿದರು. ಆರ್ಥಿಕ ಸಾಕ್ಷರತಾ ಕೇಂದ್ರಸಮಾಲೋಚಕ ಲತೇಶ್ ಸ್ವಾಗತಿಸಿದರು. ಲೀಡ್ ಬ್ಯಾಂಕ್ ಸಿಬ್ಬಂದಿ ಗಿರೀಶ್ ವಂದಿಸಿದರು. ಇದೇ ಸಂದರ್ಭ ಬೀದಿ ಬದಿ ವ್ಯಾಪಾರಿಗಳಿಗೆ ನೀಡಲಾಗುವ ಸಾಲ ಸೌಲಭ್ಯವನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು. ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಉಮಾವತಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ವಿವಿಧ ಬ್ಯಾಂಕುಗಳ ಮ್ಯಾನೇಜರ್ ಗಳು, ರೈತರು, ಉದ್ಯಮಿಗಳು ಉಪಸ್ಥಿತರಿದ್ದರು.