ಕೊನೆಗೂ ಬಂಟ್ವಾಳ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಹಲವು ಕಸರತ್ತುಗಳು ನಡೆದಿದ್ದು, ಅಧ್ಯಕ್ಷ ಸ್ಥಾನ ಯಾರಿಗೆ ಲಭಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ 10.30ಕ್ಕೆ ಈ ಎಲ್ಲ ಕುತೂಹಲಗಳ ಕ್ಲೈಮ್ಯಾಕ್ಸ್ ಆರಂಭಗೊಳ್ಳಲಿದ್ದು, ಆ ಹೊತ್ತಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಆಗಬೇಕು.
ಬಳಿಕ 12.30ಕ್ಕೆ ನಾಮಪತ್ರ ಪರಿಶೀಲನೆ. ಆಗ ಅಭ್ಯರ್ಥಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ. ಅಲ್ಲಿಯವರೆಗೆ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಉಳಿಯುವ ಸಾಧ್ಯತೆ ಇದೆ. ಅವಿರೋಧ ಆಯ್ಕೆಯಾಗದೇ ಇದ್ದರೆ, ಸ್ಪರ್ಧೆಯು ಪೌರಸಭೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ 1965ರ ಪ್ರಕಾರ ನಡೆಯುತ್ತದೆ. ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ಶಾಸಕರು ಚುನಾಯಿತ ಸದಸ್ಯರೊಂದಿಗೆ ಮತದಾನ ಮಾಡಲು ಅರ್ಹರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ಬಿ ಮಹಿಳೆ ಅರ್ಹರಾಗಿದ್ದಾರೆ.
ಅತಂತ್ರ ಪುರಸಭೆ: 2018, ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರಕಿತ್ತು. 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿದ್ದವು. ಚುನಾವಣೆ ನಡೆದರೆ, ಸಂಸದ, ಶಾಸಕರ ಮತಬಲದಿಂದ ಬಿಜೆಪಿಗೆ 13 ಸಂಖ್ಯಾಬಲ ದೊರಕುತ್ತದೆ.
ನಿರ್ಣಾಯಕವಾಗುವುದೇ ಎಸ್.ಡಿ.ಪಿ.ಐ? ಎಸ್.ಡಿ.ಪಿ.ಐ. ನಿರ್ಣಾಯಕ ಸ್ಥಾನ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಅರ್ಹ ಅಭ್ಯರ್ಥಿ ಇದ್ದು, ಎಸ್.ಡಿ.ಪಿ. ಐ ಯಾರಿಗೆ ಮತ ಹಾಕುತ್ತದೆ ಅಥವಾ ಮತ ಹಾಕದೆ ಉಳಿಯುತ್ತದೆಯೇ ಎಂಬುದರ ಮೇಲೆ ಆಯ್ಕೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಎಸ್.ಡಿ.ಪಿ.ಐ ಗಳಲ್ಲಿ ಒಂದಿಬ್ಬರನ್ನು ಬಿಟ್ಟರೆ ಎಲ್ಲವೂ ಹೊಸ ಮುಖಗಳೇ. ಆದರೆ ಕಾಂಗ್ರೆಸ್ ನಲ್ಲಿ ಮರು ಆಯ್ಕೆಗೊಂಡ ಸದಸ್ಯರ ಸಂಖ್ಯೆ ಅಧಿಕವಿದ್ದು, ಸಹಜವಾಗಿಯೇ ಆಕಾಂಕ್ಷಿಗಳೂ ಅಧಿಕವಿರುವ ಕಾರಣ ಕ್ಷಣ ಕ್ಷಣವೂ ಕುತೂಹಲ ಕೆರಳಿಸುವಂತೆ ಚುನಾವಣೆ ಮಾಡಿದೆ. ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿ, ಸ್ಪರ್ಧೆಗೊಳಗಾಗಿ ನೂತನವಾಗಿ ಆಯ್ಕೆಯಾಗುವ ಅಧ್ಯಕ್ಷ, ಉಪಾಧ್ಯಕ್ಷರು, ಸಾರ್ವಜನಿಕರಿಗೆ ಬೇಕಾದ ಭ್ರಷ್ಟಾಚಾರರಹಿತ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನಡೆಸುವತ್ತಲೂ ಇದೇ ರೀತಿ ಮುಂದಾಗಬೇಕು ಎಂಬುದು ಜನರ ಬೇಡಿಕೆಯಾಗಿದೆ.