ಬಂಟ್ವಾಳ: ಸರ್ಕಾರಿ ಇಲಾಖಾ ಮಟ್ಟದಲ್ಲಿ ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯ ಜೊತೆಗೆ ಬಾಕಿ ಉಳಿದಿರುವ ಕೆಲಸಗಳ ಫಾಲೋಅಪ್ ಅಗತ್ಯ. ಅದರಲ್ಲೂ ವಿಶೇಷವಾಗಿ ಕಂದಾಯ ಇಲಾಖೆಯ ಕೆಲಸಗಳ ಬೆನ್ನತ್ತದೇ ಇದ್ದರೆ ವರ್ಷಗಟ್ಟಲೆ ಬಾಕಿ ಉಳಿಯುವ ಸಾಧ್ಯತೆಯೂ ಇದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ ಹೇಳಿದರು.
ಬಂಟ್ವಾಳ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ಸಂದರ್ಭ ಮಾತನಾಡಿದ ತಾಪಂ ಇಒ ರಾಜಣ್ಣ, ಪ.ಜಾತಿ, ಪಂಗಡಗಳಿಗೆ ಸಂಬಂಧಿಸಿದ ಕೆಲಸಗಳನ್ನು ಶೀಘ್ರ ವಿಲೇವಾರಿ ಮಾಡಿ, ತಾಪಂ, ಗ್ರಾಪಂಗಳಲ್ಲಿ ಕೆಲಸಗಳು ಆಗದೇ ಇದ್ದರೆ ಅದನ್ನು ಕೂಡಲೇ ಗಮನಕ್ಕೆ ತನ್ನಿ ಎಂದು ಹೇಳಿದರು.
ಈ ಸಂದರ್ಭ ನಾನಾ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ವಿವರಗಳನ್ನು ಸಭೆಗೆ ನೀಡಿದರು. ಪಿಡಬ್ಲ್ಯುಡಿ ಎಇಇ ಷಣ್ಮುಗಂ ಮಾತನಾಡಿ, ಸಿದ್ಧಕಟ್ಟೆ ಬಂಟ್ವಾಳ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಲಾ ಸಂಪರ್ಕ ಸೇತು ಕಾರ್ಯವೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು. ಪಂಚಾಯಿತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು ಸಕಾಲಕ್ಕೆ ತೆರಳಿ ಎಂದು ಇದೇ ವೇಳೆ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಸಲಹೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ವಿವಿಧ ಇಲಾಖಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.