ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರನ್ನು ಜಿಲ್ಲಾ ಮಟ್ಟದಲ್ಲಿ ನಡೆದ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಶೇ.100 ಫಲಿತಾಂಶ ಪಡೆದ ಹೈಸ್ಕೂಲುಗಳಾದ ಸರ್ಕಾರಿ ಪ್ರೌಢಶಾಲೆ ಕೊಡ್ಮಣ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಎಸ್.ವಿ.ಎಸ್.ಪ್ರೌಢಶಾಲೆ ಬಂಟ್ವಾಳಕ್ಕೆ ಪುರಸ್ಕಾರ ನೀಡಲಾಯಿತು. 2019-20ನೇ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಠ ಅಂಕ ಪಡೆದ ವಾಮದಪದವಿನ ದೀಕ್ಷಾ, ಕೊಯಿಲದ ಗೀತಾ ಎಚ್, ಶಂಭೂರಿನ ಜೀವಿತಾ ಅವರಿಗೆ ನಗದು ಬಹುಮಾನ ನೀಡಲಾಯಿತು. 2019-20ನೇ ಸಾಲಿನಲ್ಲಿ ಗರಿಷ್ಠ ಹೆಣ್ಣುಮಕ್ಕಳು ಜನಿಸಿದ ಗ್ರಾಪಂ ಆದ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಪಂಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು ಎಂದು ಬಂಟ್ವಾಳ ಶಿಶು ಆಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ತಿಳಿಸಿದ್ದಾರೆ.