ಬಂಟ್ವಾಳ

ಪ್ರಕೃತಿ, ಭಾಷೆಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟುಹೋಗಬೇಕಿದ್ದರೆ, ಅದನ್ನು ಉಳಿಸಬೇಕು – ವಿಠಲ ನಾಯಕ್

ಇಂದು ನಮ್ಮ ಮಕ್ಕಳು ಕನ್ನಡ ಮಾತನಾಡದೇ ಇದ್ದರೆ, ಅವರಿಗೆ ಕೀಳರಿಮೆ ಬೆಳೆದಿದ್ದರೆ ಅದಕ್ಕೆ ನಾವೇ ಕಾರಣ, ಪ್ರಕೃತಿ ಹಾಗೂ ಭಾಷೆ ನಾಶವಾಗುತ್ತಿರುವ ಈ ಸನ್ನಿವೇಶದಲ್ಲಿ ಅವನ್ನು ನಾವು ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ಬಿಟ್ಟುಹೋಗಬೇಕಿದ್ದರೆ ಅದನ್ನು ಉಳಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಶಿಕ್ಷಕ ವಿಠಲ ನಾಯಕ್ ಹೇಳಿದರು.

ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕೆಲ ಹಾಸ ಸನ್ನಿವೇಶಗಳು ಮತ್ತು ಹಾಡುಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿವಿಗೆ ಬೇಕಾದ ಸೂತ್ರಗಳನ್ನು ಒದಗಿಸಿದ ಅವರು, ಆಂಗ್ಲ ಭಾಷೆಯನ್ನು ದ್ವೇಷಿಸದೆ ಕನ್ನಡವನ್ನು ಪ್ರೀತಿಸೋಣ, ನಮ್ಮ ಸಂಸ್ಕೃತಿಯನ್ನು ಉಳಿಸಿದರೆ, ಭಾಷೆಯೂ ಉಳಿಯುತ್ತದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ, ಕನ್ನಡ ಭಾಷೆಯನ್ನು ಪ್ರೀತಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಿದ್ದು, ರಾಜ್ಯೋತ್ಸವ ಸಂದರ್ಭ ನಾಡು ಕಟ್ಟಿದ ಮಹಾಪುರುಷರ ಸ್ಮರಣೆ ಮಾಡಬೇಕು, ಬಂಟ್ವಾಳ ತಾಲೂಕಿನವರೇ ಆದ ಪಂಜೆ ಮಂಗೇಶರಾವ್, ಏರ್ಯ ಲಕ್ಷ್ಮೀನಾರಾಯಣ ಆಳ್ವರಂಥ ಅನೇಕರು ಕನ್ನಡ ಭಾಷಾ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ ಎಂದರು.

ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ರಾಜ್ಯೋತ್ಸವದ ಸಂದರ್ಭ ಗ್ರಾಮೀಣ ಪ್ರತಿಭೆಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ, ಕನ್ನಡ ನಾಡು, ನುಡಿಗಾಗಿ ಹೋರಾಡಿದ ಮಹನೀಯರನ್ನು ನೆನಪಿಸುವುದರ ಜೊತೆಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದು ಇಂದಿನ ಅಗತ್ಯ ಎಂದರು.

ಜಾವೆಲಿನ್ ಎಸೆತ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರತಿಭೆ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಲಿತು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಾಣಿಲ ಸರ್ಕಾರಿ ಪ್ರೌಢಶಾಲೆಯ ಅನಿರುದ್ಧ, ಕೊಯ್ಲ ಸರ್ಕಾರಿ ಪ್ರೌಢಶಾಲೆಯ ಲತಾ ಎಚ್, ಶಂಭೂರು ಸರ್ಕಾರಿ ಪ್ರೌಢಶಾಲೆಯ ಪ್ರತೀಕ್ಷಾ ಎಚ್. ಎಸ್. ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಸಿಡಿಪಿಒಗಳಾದ ಗಾಯತ್ರಿ ಕಂಬಳಿ, ಸುಧಾ ಜೋಷಿ, ಸಬ್ ರಿಜಿಸ್ಟ್ರಾರ್ ಕವಿತಾ ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸ್ವಾಗತಿಸಿದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ವಿಡಿಯೋಗಳಿಗೆ ಕ್ಲಿಕ್ ಮಾಡಿರಿ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ