ಬಂಟ್ವಾಳ: ಬಂಟ್ವಾಳ ತಾಲೂಕಿನ ಶಂಭೂರು ಸಹಿತ ನದಿ ತೀರದ ಮುಳುಗಡೆ ಪ್ರದೇಶಗಳನ್ನು ಸರ್ವೆ ಮಾಡಿ ಅವುಗಳನ್ನು ಸದುಪಯೋಗಪಡಿಸಿ, ತಾಲೂಕಿನ ಜಾನುವಾರುಗಳಿಗೆ ಬೇಕಾಗಿರುವ ರಸಮೇವಿಗೆ ಅಗತ್ಯವಿರುವ ಮೆಕ್ಕೆಜೋಳ ಬೆಳೆಸುವ ಯೋಜನೆಯೊಂದನ್ನು ರೂಪಿಸಲು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಶುಸಂಗೋಪನಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಅವಿನಾಶ್ ಭಟ್ ಅವರಿಂದ ಹಸುಗಳ ಸಹಿತ ಜಾನುವಾರುಗಳು ಹಾಗೂ ಅವುಗಳಿಗೆ ಬೇಕಾದ ಮೇವಿನ ಕುರಿತು ಮಾಹಿತಿ ಪಡೆದ ಬಳಿಕ ಮಾತನಾಡಿದರು.
ತುಂಬೆ ನೀರಾ ಘಟಕ ವ್ಯರ್ಥವಾಗದಂತೆ ಕಾರ್ಯಾರಂಭ ಮಾಡುವ ಮೊದಲು ನೀರಾ ಇಳಿಸುವ ತಂಡವನ್ನು ಸಿದ್ಧಗೊಳಿಸಿ, ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಶಾಸಕರು ಸೂಚಿಸಿದರು. ಇದೇ ವೇಳೆ ಅಕ್ಷರದಾಸೋಹದ ಧಾನ್ಯಗಳು ಗೋಡೌನ್ ನಲ್ಲೇ ಉಳಿದಿರುವ ಕುರಿತು ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನ ಅನಿವಾರ್ಯತೆ ಕುರಿತು ಜಿಪಂ ಸದಸ್ಯ ತುಂಗಪ್ಪ ಬಂಗೇರ ವಿವರಿಸಿದರು.ಮಿನಿ ವಿಧಾನಸೌಧ ಸೋರುತ್ತಿರುವ ಕುರಿತೂ ಅವರು ಗಮನ ಸೆಳೆದರು. ಅಂತ್ಯಸಂಸ್ಕಾರದ ಸಹಾಯಧನವೂ ವಿಳಂಬವಾಗುವ ಕುರಿತು ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಗಮನ ಸೆಳೆದರು.
ತಾಪಂ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್. ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಆನಂದ ಶಂಭೂರು, ಜೋಕಿಂ ಮಿನೇಜಸ್, ಭಾರತಿ ಚೌಟ, ಯಶವಂತ ನಾಯಕ್, ಚಂದ್ರಶೇಖರ ಶೆಟ್ಟಿ, ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಕಮಲಾಕ್ಷಿ ಪೂಜಾರಿ ಮತ್ತು ರವೀಂದ್ರ ಕಂಬಳಿ ವಿವಿಧ ವಿಷಯಗಳ ಕುರಿತು ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.