ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳ ರಕ್ಷಣೆಗೆ ಸರ್ಕಾರ, ಜಿಲ್ಲಾಡಳಿತ ಬದ್ಧವಾಗಿದೆ, ಕಾರಿಂಜ ಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗುವುದು. ದೇವಸ್ಥಾನದ ಹಿತದೃಷ್ಟಿಯಿಂದ ಆಸುಪಾಸಿನ ಕೋರೆಗಿಳಗೆ ತಡೆ ನೀಡಲು ನಿರ್ಧರಿಸಲಾಗಿದೆ ಎಂದು ಧಾರ್ಮಿಕ ದತ್ತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಜೊತೆಗೆ ಸೋಮವಾರ ಭೇಟಿ ನೀಡಿದರು.
ಕಾರಿಂಜದಲ್ಲಿ ಕೆಲವು ದಿನಗಳ ಹಿಂದೆ ಕುಸಿದು ಬಿದ್ದಿರುವ ತಡೆಗೋಡೆಯನ್ನು ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರ ಜತೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಲ್ಲುಕೋರೆ ಹಾಗೂ ಜಲ್ಲಿಕ್ರಷರ್ ನಿಂದ ದೇವಸ್ಥಾನಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಭಕ್ತಾದಿಗಳ ದೂರಿನ ಹಿನ್ನೆಲೆಯಲ್ಲಿ ಶಾಸಕರ ಜೊತೆ ಪರಿಶೀಲನೆ ನಡೆಸಿ, ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕೋರೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗುವುದು ಎಂದ ಅವರು, ಗಣಿಗಾರಿಕೆಯಿಂದ ದೇವಳಕ್ಕೆ ಹಾಗೂ ಇಲ್ಲಿನ ಬಂಡೆಗಳಿಗೆ ಆಗುವ ತೊಂದರೆಗಳ ಬಗ್ಗೆ ಎನ್ಐಟಿಕೆ ಯ ತಜ್ಞರಿಂದ ಪರಿಶೀಲನೆ ನಡೆಸಿ ಅವರ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕುಸಿದು ಬಿದ್ದಿರುವ ಆವರಣಗೋಡೆಯ ಪುನರ್ ನಿರ್ಮಾಣ ಹಾಗೂ ಅನೇಕ ತುರ್ತು ಕಾಮಗಾರಿಗಳನ್ನು ಶೀಘ್ರ ನಡೆಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶಾಸಕ ರಾಜೇಶ್ ನಾಯ್ಕ್ ಅವರ ಕೋರಿಕೆಯಂತೆ ಕಾರಿಂಜೇಶ್ವರ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಕೆ ಸೇರ್ಪಡೆಗೊಳಿಸಲಾಗಿದ್ದು, ತಜ್ಞರ ಸಲಹೆಯೊಂದಿಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಬೂಡ ಆಧ್ಯಕ್ಷ ದೇವದಾಸ ಶೆಟ್ಟಿ, ಮುಜರಾಯಿ ಇಲಾಖೆ ಸಹಾಯಕ ಕಮೀಷನರ್ ವೆಂಕಟೇಶ್, ಗಣಿ ಇಲಾಖಾಧಿಕಾರಿ ಮಾಹದೇಶ್ವರ, ತಹಶಿಲ್ದಾರ್ ರಶ್ಮಿ ಎಸ್. ಆರ್, ಕಂದಾಯ ಅಧಿಕಾರಿ ನವೀನ್, ಗ್ರಾಮ ಕರಣೀಕೆ ಆಶಾ ಮೆಹಂದಲೆ, ಪ್ರಮುಖರಾದ ಗಣಪತಿ ಮಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಶಿವಪ್ಪ ಗೌಡ,ಮೋಹನ್ ಆಚಾರ್ಯ, ಆಡಳಿತಾಧಿಕಾರಿ ನೋಣಯ್ಯ ನಾಯ್ಕ್, ರಾಜರಾಮ್ ನಾಯಕ್, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ, ಸುದರ್ಶನ ಬಜ, ಪ್ರದೀಪ್ ಅಜ್ಜಿಬೆಟ್ಟು, ಪ್ರಮೋದ್ ರೈ ಕಾಡಬೆಟ್ಟು,ರಾಜಗೋಪಾಲ ಪ್ರಭು, ರಾಮಕೃಷ್ಣ ಮಯ್ಯ, ರಾಧಾಕೃಷ್ಣ ಮಯ್ಯ, ಆರ್ಚಕ ಜಯಶಂಕರ ಉಪಾಧ್ಯಾಯ, ಚಿದಾನಂದ ರೈ ಮತ್ತಿರರು ಉಪಸ್ಥಿತರಿದ್ದರು.