ಬಂಟ್ವಾಳ: ಹ್ಯುಮಾನಿಟಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ತುಳುಕೂಟ ಕುವೈಟ್ ಇವರ ಆರ್ಥಿಕ ಸಹಕಾರದೊಂದಿಗೆ ಬಂಟ್ವಾಳದ ಪಲ್ಲಮಜಲು ಎಂಬಲ್ಲಿ ಪುನರ್ ನಿರ್ಮಾಣಗೊಂಡಿರುವ ಲೀಲಾವತಿ ಬಂಗೇರ ಅವರ ಮನೆ ಹಸ್ತಾಂತರ ಹಾಗೂ ಗೃಹಪ್ರವೇಶ ಸಮಾರಂಭ ನಡೆಯಿತು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ನೂತನ ಮನೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಸಮಾಜದಲ್ಲಿ ಸೂರು ಇಲ್ಲದವರಿಗೆ ಮನೆ ನಿರ್ಮಿಸಿ ಕೊಡವಂತಹ ಹ್ಯುಮ್ಯಾನಿಟಿ ಟ್ರಸ್ಟ್ ನ ಕಾರ್ಯ ಶ್ಲಾಘನೀಯ. ಟ್ರಸ್ಟ್ ನ ಇಂತಹ ಸಮಾಜಮುಖಿ ಕಾರ್ಯದಿಂದ ಅದೆಷ್ಟೊ ಮಂದಿ ಸಂತೋಷ, ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಇಂದು ಲೀಲಾವತಿ ಬಂಗೇರ ಅವರ ಮುಖದಲ್ಲಿ ನಗು ಇದೆ.ಅವರ ನಗುವಿನ ಮೂಲಕ ನಾವು ನಮ್ಮಲ್ಲಿ ಸಂತೋಷ ಕಾಣುತ್ತಿದ್ದೇವೆ. ಇಂತಹ ಪ್ರೀತಿ, ಸಹಬಾಳ್ವೆಯ ಬದುಕು ನಮ್ಮೆಲ್ಲರದ್ದಾಗಬೇಕು ಎಂದು ತಿಳಿಸಿದರು. ಹ್ಯುಮ್ಯಾನಿಟಿ ಸಂಸ್ಥಾಪಕ ರೋಷನ್ ಬೆಳ್ಮಣ್ ಅಧ್ಯಕ್ಷತೆ ವಹಿಸಿದ್ದರು.ತುಳುಕೂಟ ಕುವೈಟ್ ಮಾಜಿ ಅಧ್ಯಕ್ಷ ಎಲಿಯಾಸ್,ಎ.ಕೆ. ವಸಂತ್ ಕುಮಾರ್, ವನಿತಾ, ಮನೋಜ್ ಬಂಗೇರ ಉಪಸ್ಥಿತರಿದ್ದರು.
ಮನೆ ನಿರ್ಮಾಣ ಕಾರ್ಯದಲ್ಲಿ ನೆರವಾದ ರಾಕೇಶ್ ಪ್ರವೀಣ್ ಕ್ರಾಸ್ತ ಅವರನ್ನು ಸನ್ಮಾನಿಸಲಾಯಿತು. ಹ್ಯುಮ್ಯಾನಿಟಿ ಟ್ರಸ್ಟಿ ಪ್ರಶಾಂತ್ ಫ್ರಾಂಕ್ ವಂದಿಸಿದರು, ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕುಸಿದು ಬೀಳುವ ಮುರುಕಲು ಮನೆಯಲ್ಲಿ ಲೀಲಾವತಿ ಬಂಗೇರ ಅವರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಕಷ್ಟದ ಜೀವನ ನಡೆಸುತ್ತಿದ್ದರು. ಇದನ್ನು ಮನಗಂಡು ಹ್ಯುಮ್ಯಾನಿಟಿ ಟ್ರಸ್ಟ್ ಹಾಗೂ ತುಳುಕೂಟ ಕುವೈಟ್ ದಾನಿಗಳ ಸಹಕಾರ ಹಾಗೂ ಶ್ರಮದಾನದ ಮೂಲಕ ಸುಸಜ್ಜಿತ ಮನೆ ನಿರ್ಮಿಸಿ ಮಾನವೀಯತೆ ಮೆರೆದಿದೆ.