ಬಂಟ್ವಾಳ

ಫಾರೂಕ್ ಹಂತಕನ ಅರೆಸ್ಟ್, ಸುರೇಂದ್ರ ಹಂತಕನಿಗೆ ಹುಡುಕಾಟ

ಬುಧವಾರ ಮಧ್ಯಾಹ್ನ ಬಂಟ್ವಾಳ ಭಂಡಾರಬೆಟ್ಟಿನ ಫ್ಲ್ಯಾಟ್ ಒಂದರಲ್ಲಿ ಸುರೇಂದ್ರ ಬಂಟ್ವಾಳ್  ಮೃತದೇಹ ದೊರಕಿದ ಬಳಿಕ ಬಂಟ್ವಾಳ ಪೊಲೀಸರಿಗೆ ಬಿಡುವಿಲ್ಲ. ನಗರ, ಗ್ರಾಮಾಂತರ, ಟ್ರಾಫಿಕ್ ಠಾಣಾ ಪೊಲೀಸರು, ಬಂಟ್ವಾಳದಲ್ಲಿ ಕೆಲಸ ಮಾಡಿ ಅನುಭವವಿದ್ದ ಎಸ್.ಐ.ಗಳ ಸಹಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ವ್ಯಾಪಕ ಕಾರ್ಯಾಚರಣೆಗಳು ನಡೆಯುತ್ತಿವೆ. ಒಂದೆಡೆ ಸುರೇಂದ್ರ ಬಂಟ್ವಾಳ್ ಹಂತಕರ ಜಾಡು ಹಿಡಿದು ತಂಡಗಳನ್ನಾಗಿ ಮಾಡಿ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ಶುಕ್ರವಾರ ಸಂಜೆ ಮೇಲ್ಕಾರಿನಲ್ಲಿ ಮತ್ತೊಂದು ಹತ್ಯೆ ನಡೆದುಹೋಯಿತು. ಠಾಣೆಯಲ್ಲಿ ಹಲವು ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದ ಕಲ್ಲಡ್ಕದ ಫಾರೂಕ್ ನನ್ನು ರಸ್ತೆ ಬದಿಯಲ್ಲಿಯೇ ತಲವಾರಿನಿಂದ ಇರಿದು ಭೀಕರವಾಗಿ ಹತ್ಯೆ ನಡೆಸಿದ್ದ ಆರೋಪಿಗಳ ಹುಡುಕಾಟಕ್ಕೂ ಇದೇ ಪೊಲೀಸರು ಹೊರಡಬೇಕಾಯಿತು.

ಒಂದೆಡೆ ಸುರೇಂದ್ರ ಬಂಟ್ವಾಳ್ ಹತ್ಯೆ ಆರೋಪಿಗಳ ಹುಡುಕಾಟ ಮತ್ತೊಂದೆಡೆ ಫಾರೂಕ್ ಕೊಲೆ ಆರೋಪಿಗಳು ಕೈಗೆ ಸಿಗದಂತೆ ನೋಡಿಕೊಳ್ಳುವುದರ ಜತೆಗೆ ಎರಡೇ ದಿನಗಳಲ್ಲಿ ಎರಡು ಭೀಕರ ಹತ್ಯೆಗಳನ್ನು ಕಂಡ ಬಂಟ್ವಾಳದ ಜನತೆಯ ಆತಂಕ ಶಮನ ಮಾಡುವ ಕಾರ್ಯ. ಇದರಲ್ಲಿ ಫಾರೂಕ್ ಹತ್ಯೆ ಆರೋಪಿಗಳನ್ನು ಬೆನ್ನಟ್ಟಿ ಶನಿವಾರ ಬೆಳಗ್ಗೆ ಆರೋಪಿಯನ್ನು ಅರೆಸ್ಟ್ ಮಾಡಲು ಪೊಲೀಸರು ಯಶಸ್ವಿಯಾದರು. ಈ ಕುರಿತು ಜಿಲ್ಲಾ ಎಸ್ಪಿ ಹೊರಡಿಸಿದ ಪತ್ರಿಕಾ ಹೇಳಿಕೆ ಪ್ರಕಾರ, ಆರೋಪಿಗಳ ಪತ್ತೆಗಾಗಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಪ್ರಸನ್ನ,  ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್, ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಆರೋಪಿಗಳು ಪರಾರಿಯಾಗದಂತೆ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಅಳವಡಿಸಿ ತೀವ್ರ ಶೋಧ ನಡೆಸಲಾಗಿತ್ತು. ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿರುವ ಮಾಹಿತಿ ಲಭಿಸಿದ್ದು,  ಶನಿವಾರ ಮುಂಜಾನೆ ಪುತ್ತೂರು ತಾಲೂಕಿನ ಗುಂಡ್ಯ ಸಮೀಪ ಆರೋಪಿಗಳನ್ನು ಅಡ್ಡಗಟ್ಟಿ ವಶಕ್ಕೆ ಪಡೆಯುವ ವೇಳೆ ಆರೋಪಿಗಳ ಪೈಕಿ ಖಲೀಲ್‌ ಎಂಬಾತನು ಪೋಲೀಸರ ಮೇಲೆ ತಲವಾರಿನಿಂದ ದಾಳಿ ನಡೆಸಿದಾಗ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್‌ ಉಪನಿರೀಕ್ಷಕ ಪ್ರಸನ್ನರವರಿಗೆ ಗಾಯವಾಗಿರುತ್ತದೆ. ಈ ವೇಳೆ ಬಂಟ್ವಾಳ ನಗರ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಅವಿನಾಶ್ ರವರು ಆರೋಪಿ ಖಲೀಲ್‌ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ