ಮಕ್ಕಳ ಕಲಿಕೆಯಲ್ಲಿ ವಿದ್ಯಾರ್ಥಿಗಳ ದಿನನಿತ್ಯದ ಬದುಕು, ಸ್ಥಳೀಯ ಸಂಪನ್ಮೂಲಗಳು, ಸಮುದಾಯ ಹಾಗು ಅನುಭವಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಶಿಕ್ಷಣ ವಿಭಾಗದ ಕಾರ್ಯಕ್ರಮ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಆಯೋಜಿಸಲಾದ “ಮಕ್ಕಳು ಮತ್ತು ಶಿಕ್ಷಣ” ಸಂವಾದ ಕಾರ್ಯಕ್ರಮದಲ್ಲಿ ಅವರು ಶಿಕ್ಷಕರು ಹಾಗೂ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು.
ಜೀವನ ಕೌಶಲ್ಯವಿಲ್ಲದ ಕಲಿಕೆ ಕೇವಲ ಮಾಹಿತಿಯಾಗುತ್ತದೆ, ಜೊತೆಗೆ ಪಠ್ಯದಲ್ಲಿರುವ ಅನೇಕ ವಿಚಾರಗಳು ಅಪ್ರಯೋಜಕ ಎನ್ನಿಸಿಕೊಳ್ಳುತ್ತದೆ. ಭೌಗೋಳಿಕ ಹಿನ್ನೆಲೆಯ ಆಧಾರದಲ್ಲಿ ಬದಲಾಗುವ ಭಾಷೆ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಯ ಬದಲಾವಣೆಯ ಬಗ್ಗೆಯೂ ಗಮನಹರಿಸಿದರೆ ಸಮಾಜಶಾಸ್ತ್ರದ ಪರಿಚಯವಾಗುತ್ತದೆ ಎಂದ ಅವರು, ಶಾಲಾ ತರಗತಿಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಸಂಯೋಜಿತಗೊಳಿಸುವ ಬೋಧನಾ ಕ್ರಮಗಳು ಮಕ್ಕಳ ಕಲಿಕೆಯಲ್ಲಿ ಧನಾತ್ಮಕವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಿನ ಶಿಕ್ಷಣಪದ್ದತಿಯು ಪಠ್ಯಕ್ರಮಕ್ಕೆ ಮೀರಿದ ಜೀವನ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳಸುವಲ್ಲಿ ಹಿನ್ನಡೆಯನ್ನು ಕಾಣುತ್ತಿದೆ ಎಂದು ಅಭಿಪ್ರಾಯಿಸಿದ ಅವರು, ಈ ನಿಟ್ಟಿನಲ್ಲಿ 2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಕನಸುಗಳನ್ನು ಹುಟ್ಟುಹಾಕಿದೆ, ಇದು ಸಾಕಾರಗೊಳ್ಳಲಿ ಎಂದರು.
ಐಎಫ್ಎ ಸಂಸ್ಥೆಯು ಶಿಕ್ಷಕರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಜೊತೆಗೆ ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಡಿಎಸ್ಇಆರ್ ಟಿ ಯೊಂದಿಗೆ ಕೈ ಜೋಡಿಸಿದೆ ಎಂದ ಅವರು, ಐಎಫ್ಎ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಪತ್ರಕರ್ತ ಮತ್ತು ಐಎಫ್ಎ ಗ್ರ್ಯಾಂಟಿ, ಮೌನೇಶ ವಿಶ್ವಕರ್ಮ ಸ್ವಾಗತಿಸಿದರು . ಪತ್ರಕರ್ತ ವೆಂಕಟೇಶ್ ಬಂಟ್ವಾಳ ವಂದಿಸಿದರು. ಪತ್ರಕರ್ತ ರತ್ನದೇವ್ ಪೂಂಜಾಲಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.