ಬಂಟ್ವಾಳ: ವಿಟ್ಲ ಹೋಬಳಿಗೆ ಸಂಬಂಧಪಟ್ಟ ಸಮಸ್ಯೆ, ಅಹವಾಲುಗಳ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ವಿಟ್ಲದಲ್ಲಿ ಚರ್ಚೆ ನಡೆಸಿದರು.
೯೪ಸಿ ಯೋಜನೆಯಡಿಯಲ್ಲಿ ೨, ೯೪ಸಿಸಿ ಯೋಜನೆಯಡಿಯಲ್ಲಿ ೧೬ ಕುಟುಂಬಗಳಿಗೆ ಹಕ್ಕುಪತ್ರ, ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿಯಲ್ಲಿ ೨೨ ಮಂದಿ ಫಲಾನುಭವಿಗಳಿಗೆ ೧,೫೮,೩೭೭ ರೂ. ಮೊತ್ತದ ಚೆಕ್ ವಿತರಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಕರಣಿಕರು ಸರಕಾರಿ, ಕುಮ್ಕಿ, ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್, ಗೋಮಾಳ ಇನ್ನಿತರ ಜಮೀನುಗಳ ಬಗ್ಗೆ ಸಮರ್ಪಕ ದಾಖಲೆಗಳನ್ನು, ಗೊಂದಲವಿರುವ ಸ್ಥಳಗಳ ಬಗ್ಗೆ ಪೂರಕ ಮಾಹಿತಿ ಸಂಗ್ರಹಿಸಿ ಕಡತಗಳನ್ನು ಸಿದ್ಧಪಡಿಸಬೇಕು. ಎಸ್‌ಸಿಎಸ್‌ಟಿ ಜಾತಿಪ್ರಮಾಣ ಪತ್ರ ಸಮಸ್ಯೆಗಳ ಬಗ್ಗೆ ಗೊಂದಲ ನಿವಾರಿಸಲು ಕಂದಾಯ ನಿರೀಕ್ಷರ ಗಮನಕ್ಕೆ ತರಲು ಸೂಚನೆ ನೀಡಿದರು.
ಬಿಪಿಎಲ್ ಆದಾಯ ಮಿತಿ ಪರಿಷ್ಕರಣೆಯ ಬಗ್ಗೆ ಸರಕಾರ ಮಟ್ಟದಲ್ಲಿ ಸಮಾಲೋಚಿಸಿ ನಿರ್ಧರಿಸುವ ಬಗ್ಗೆ ಭರವಸೆ ನೀಡಿದರು. ಮುಂದಿನ ಆರ್ಥಿಕ ವರ್ಷದಲ್ಲಿ ಶಿಥಿಲಗೊಂಡ ನಾಡಕಚೇರಿ, ಗ್ರಾಮ ಕರಣಿಕರ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿಟ್ಲ ಪ.ಪಂ. ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷ ಜಯಂತಿ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ದಿವಾಕರ, ಬೆಜೆಪಿ ಬೆಂಬಲಿತ ಪ.ಪಂ ಸದಸ್ಯರು ಭಾಗವಹಿಸಿದ್ದರು. ಇದೇ ವೇಳೆ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಟ್ಲ ಕಸಬಾ, ಇಡ್ಕಿದು, ಕುಳ, ಕೆದಿಲ, ಬಿಳಿಯೂರು, ಪೆರ್ನೆ, ವಿಟ್ಲಮುಡ್ನೂರು, ಪುಣಚ, ಅಳಿಕೆ, ಕೇಪು, ಪೆರುವಾಯಿ, ಮಾಣಿಲ ಗ್ರಾಮಗಳ ೯೪ಸಿ, ೯೪ಸಿಸಿ, ಪ್ರಾಕೃತಿಕ ವಿಕೋಪ ಯೋಜನೆಗಳ ನಾನಾ ಫಲಾನುಭವಿಗಳಿಗೆ ಹಕ್ಕುಪತ್ರ, ಪರಿಹಾರ ಧನದ ಚೆಕನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ವಿಟ್ಲ ಅತಿಥಿ ಗೃಹದಲ್ಲಿ ಶುಕ್ರವಾರ ವಿತರಿಸಿದರು. ಗ್ರಾಮಕರಣಿಕರಾದ ಪ್ರಕಾಶ್, ಮಂಜುನಾಥ್, ಕರಿಬಸಪ್ಪ, ವಿನೋದ, ಸತೀಶ್, ಶಿವಾನಂದ, ಪ್ರಶಾಂತ್, ಸುರೇಶ್, ಕೃತಿಕಾ, ಚಂದ್ರಕಲಾ ಸಹಕರಿಸಿದರು.