ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳವು 2019-20ನೇ ಸಾಲಿನಲ್ಲಿ ನಡೆಸಿದ ವಿವಿಧ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಿಗಾಗಿ ಈ ಸಾಲಿನ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಲಯನ್ಸ್ನ ನಾಲ್ಕು ಕಂದಾಯ ಜಿಲ್ಲೆಗಳ ಪೈಕಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ನೇತೃತ್ವದ ಲಯನ್ಸ್ ಕ್ಲಬ್ ಬಂಟ್ವಾಳ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇತ್ತೀಚೆಗೆ ಮಂಗಳೂರಿನ ಸೆಬಾಸ್ಟಿಯನ್ ಹಾಲ್ನಲ್ಲಿ ನಡೆದ ’ದಿಲ್ಸೇ’ ಜಿಲ್ಲಾ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಅವರಿಂದ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮತ್ತವರ ತಂಡ ಪ್ರಶಸ್ತಿಯನ್ನು ಸ್ವೀಕರಿಸಿತು. ಈ ಸಂದರ್ಭ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್, ಪ್ರಥಮ ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಧಾಕಷ್ಣ ಬಂಟ್ವಾಳ ಹಾಗೂ ಕೋಶಾಧಿಕಾರಿ ದೇವಿಕಾ ದಾಮೋದರ್ ಒಳಗೊಂಡ ತಂಡ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು.
ಸ್ಥಾಪಕಾಧ್ಯಕ್ಷ ಡಾ. ಬಿ. ವಸಂತ ಬಾಳಿಗಾ, ಪೂರ್ವಾಧ್ಯಕ್ಷ ದಾಮೋದರ ಬಿ.ಎಂ. ನೇತೃತ್ವದಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಮೂಲಕ ನಿರ್ಮಲ ಹೃದಯ ಲಯನ್ಸ್ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರ ಲಯನ್ಸ್ ಕ್ಲಬ್ ವತಿಯಿಂದ ಕಳೆದ ೧೧ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯ ವಸಂತ ಕುಮಾರ್ ಶೆಟ್ಟಿಯವರು ಮುಂದಿನ ಸಾಲಿನ ಜಿಲ್ಲಾ ರಾಜ್ಯಪಾಲರಾಗಿ ಲಯನ್ಸ್ ಜಿಲ್ಲೆಯನ್ನು ಮುನ್ನಡೆಸಲಿದ್ದಾರೆ.