ಬಂಟ್ವಾಳ: ಒಂದೇ ಜಾತಿ-ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ, ದೀನ ದಲಿತರಿಗೆ, ಶೋಷಿತರಿಗೆ ಸ್ವಾಭಿಮಾನ ಬದುಕನ್ನು ನಡೆಸಬೇಕು ಎಂದು ಸಾರಿದ ಸಮಾಜೋದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಸಮಾಜದ ಜನಮನದಲ್ಲಿ ಶಾಶ್ವತವಾಗಿ ಉಳಿಯ ಬೇಕಾದರೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ ಹಾಗೂ ವೃತ್ತ ನಾಮಕರಣ ಅವಶ್ಯಕವಾಗಿ ಆಗಬೇಕಾಗಿದೆ ಎಂದು ಎಂದು ನ್ಯಾಯವಾದಿ, ನೋಟರಿ ಪಬ್ಲಿಕ್ ಆಗಿರುವ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ ಪೂಜಾರಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರನ್ನಿಟ್ಟು ವೀರಪುರುಷರ ಹೆಸರು ಜನಮನದಲ್ಲಿ ಶಾಶ್ವತವಾಗಿ ಉಳಿಯಬೇಕಾಗಿದೆ ಎಂದಿದ್ದಾರೆ.
ಮಂಗಳೂರು ನಗರದಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ವೆಂದು ಹೆಸರು ನಮೂದಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮಂಗಳೂರು ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ಮಾಲಿಕರಿಗೆ ನೋಟಿಸ್ ನೀಡಿರುವ ಘಟನೆ ಖಂಡನೀಯ ಎಂದೂ ಅವರು ಹೇಳಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸರಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಮಾಲೋಚಿಸಿ ಶೀಘ್ರದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೂಡಲೇ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಾಮಕರಣ ಮಾಡಬೇಕು. ಈ ಬಗ್ಗೆ ಸಮಾಜದ ಮುಖಂಡರ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಸಾರಿಗೆ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿ, ಹಿಂದುಳಿದ ಸಮಾಜವು ಒಟ್ಟು ಸೇರಿ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಚಂದ್ರಶೇಖರ ಪೂಜಾರಿ ತಿಳಿಸಿದ್ದಾರೆ.