ಬಂಟ್ವಾಳ: ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೇಕಾದ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಜನಸಾಮಾನ್ಯರು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ದ ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅನಂತಾಡಿ ಗ್ರಾಮದ ಆರಂಗಳದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಅನಂತಾಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ನಿರ್ಮಾಣವಾದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ನಡೆಸಿ ಮಾತನಾಡಿದರು.
ಸಾರ್ವಜನಿಕ ಶೌಚಾಲಯ ಶಂಕುಸ್ಥಾಪನೆ ನಡೆಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ ಒಳ್ಳೆಯ ವಿಷಯಕ್ಕೆ ವ್ಯವಸ್ಥೆಯನ್ನು ಬಳಸಿಕೊಳ್ಳುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಸ್ವಚ್ಛೋತ್ಸವ – ನಿತ್ಯೋತ್ಸವ ಮಾಸಾಚರಣೆಯ ವಸ್ತುಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಘನತ್ಯಾಜ್ಯ ವಿಲೇವಾರಿ ಘಟಕದ ವಾಹನಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಚಾಲನೆ ನೀಡಿದರು. ಕಾಮಗಾರಿಗೆ ಸಹಕಾರ ನೀಡಿದ ವ್ಯಕ್ತಿಗಳನ್ನು ಗೌರವಿಸಲಾಯಿತು. ಕಸ ಸಂಗ್ರಹಣೆಯ ಬುಟ್ಟಿಗಳ ವಿತರಣೆ ನಡೆಯಿತು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮಲ್ಲಿಕಾ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾವೆ, ಕಮಲಾಕ್ಷಿ, ಅನಂತಾಡಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಸನತ್ ಕುಮಾರ ರೈ, ಉಪಾಧ್ಯಕ್ಷೆ ಕವಿತಾ, ಸುಲೋಚನಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ ಕುಮಾರ್ ಪ್ರಸ್ತಾವನೆಗೈದರು. ಅನಂತಾಡಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಪ್ರವೀಣ್ ಜೋಷಿ ವಂದಿಸಿದರು. ನೆರವು ಘಟಕ ಎಚ್ ಆರ್ ಡಿ ನವೀನ್, ಡೊಂಬಯ್ಯ ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ ಕೆ. ಸಹಕರಿಸಿದರು.