ವಿಟ್ಲ

ಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇನ್ನಿಲ್ಲ

ತನ್ನದೇ ಶೈಲಿಯ ಹಾಡುಗಾರಿಕೆ ಮೂಲಕ ಯಕ್ಷಗಾನಪ್ರಿಯರ ಮನ್ನಣೆ ಗಳಿಸಿದ್ದ ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.27ರಂದು ಬೆಳಗ್ಗೆ ನಿಧನ ಹೊಂದಿದರು. ಮೂವರು ಪುತ್ರಿಯರು ಮತ್ತು ಓರ್ವ ಪುತ್ರ (ಹವ್ಯಾಸಿ ಭಾಗವತ ಮುರಳೀಕೃಷ್ಣ ಶಾಸ್ತ್ರಿ)ನನ್ನು ಹಾಗೂ ಅಪಾರ ಬಂಧು, ಬಳಗ, ಶಿಷ್ಯ ಹಾಗೂ ಅಭಿಮಾನಿ ವೃಂದವನ್ನು ಅವರು ಅಗಲಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಠಲ ಶಾಸ್ತ್ರಿ, ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳ ಸಹಿತ ಹಲವಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿರುವ ಅವರು ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದರು. ಹವ್ಯಾಸಿ ಭಾಗವತರಾಗಿಯೂ ಕೆಲ ವರ್ಷ ವೃತ್ತಿ ಮೇಳಗಳಲ್ಲಿ ಭಾಗವತರಾಗಿಯೂ ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲಿನವರು. 1944ರಲ್ಲಿ ಪ್ರಸಿದ್ಧ ಚಕ್ರಕೋಡಿ ಮನೆತನದ ತೆಂಕಬೈಲು ಕೃಷ್ಣ ಶಾಸ್ತ್ರಿ ಸಾವಿತ್ರಿಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿಯವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲು ಎಂಬಲ್ಲಿ ವಾಸಿಸುತ್ತಿದ್ದರು. ಸಂಬಂಧಿಕರಾದ ರಾಮ ಭಟ್ಟ, ನಾರಾಯಣ ಭಟ್ಟರ ಪ್ರೋತ್ಸಾಹದಿಂದ ಹಿಮ್ಮೇಳ ಭಾಗವತಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು, ಚೆಂಡೆ, ಮದ್ದಳೆ ನುಡಿಸುವುದರಲ್ಲೂ ನಿಷ್ಣಾತರು. ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆಯ ಕಲೆಯನ್ನು ಕಲಿತುಕೊಂಡರೆ, ಬಜಕ್ಕಳ ಗಣಪತಿ ಭಟ್ಟರಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದರು. ಹವ್ಯಾಸಿ ಭಾಗವತರಾಗಿಯೇ ಜನಪ್ರಿಯರಾಗಿದ್ದ ಇವರು, ಅಗರಿ ಶೈಲಿಯಿಂದ ಪ್ರಭಾವಿತರಾಗಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಲವಾರು ಹವ್ಯಾಸಿ ಆಟ, ಕೂಟಗಳಿಗೆ ಭಾಗವತಿಕೆ ಮಾಡಿದ್ದಾರೆ. ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ಶಾಸ್ತ್ರೀ ಅವರು, ದಕ್ಷಾಧ್ವರ, ಕರ್ಣಪರ್ವ, ದೇವಿ ಮಹಾತ್ಮೆ, ಕೃಷ್ಣಲೀಲೆ-ಕಂಸವಧೆ, ಭಾರ್ಗವ ವಿಜಯ, ಕೃಷ್ಙಾರ್ಜುನ ಸಹಿತ ಹಲವು ಪ್ರಸಂಗಗಳಲ್ಲಿ ತೆಂಕಬೈಲು ಶೈಲಿಯನ್ನು ಪ್ರಸ್ತುತಪಡಿಸುತ್ತಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts