ಬಂಟ್ವಾಳ: ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾಕ್ಕೆ ಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ಕರೆನೀಡಿದನ್ವಯ ಬಂಟ್ವಾಳದಲ್ಲಿ ಪತ್ರ ಚಳವಳಿ ಅಭಿಯಾನವನ್ನು ಕೈಗೊಳ್ಳಲಾಯಿತು.
ಎಬಿವಿಪಿ ಬಂಟ್ವಾಳ ಶಾಖೆ ವತಿಯಿಂದ ಬಿಸಿರೋಡು ಹಾಗೂ ಸಿದ್ದಕಟ್ಟೆ ಅಂಚೆ ಕಛೇರಿ ಬಳಿ ಶನಿವಾರ ಪತ್ರ ಚಳವಳಿ ಅಭಿಯಾನ ನಡೆದಿದ್ದು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸೂಕ್ತವಾದ ಕಾನೂನು ರೂಪಿಸಲು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.ಈ ಜಾಲಕ್ಕೆ ಪ್ರಮುಖವಾಗಿ ಕಾಳೆಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯವೇ ಬಲಿಯಾಗುತ್ತಿರುವುದು ಅಪಾಯಕಾರಿ ಸಂಗತಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹು ಪ್ರಭಾವಿಗಳು ಭಾಗಿಯಾಗಿರುವ ಈ ಜಾಲವನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರ್ಕಾರದ ಮುಂದಿದೆ. ಅದಕ್ಕಾಗಿ ಪ್ರಬಲ ಕಾನೂನನ್ನು ರೂಪಿಸಿದರೆ ಪರಿಹಾರ ಸಾಧ್ಯ. ಸರ್ಕಾರ ನಿಷ್ಪಕ್ಷಪಾತ ತನಿಖೆ ಹಾಗೂ ಕಾನೂನನ್ನು ರೂಪಿಸಿ ಈ ದಂಧೆ ವಿರುದ್ಧ ಸಮರ ಸಾರಬೇಕೆಂದು ಪತ್ರ ಚಳುವಳಿಯ ಮೂಲಕ ಆಗ್ರಹಿಸಲಾಯಿತು. ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಿಕೊಡಲಾಯಿತು.ಈ ಸಂದರ್ಭ ತಾಲೂಕು ಸಂಚಾಲಕರಾದ ಹರ್ಷಿತ್ ಕೊಯಿಲ, ಸಹ ಸಂಚಾಲಕರಾದ ದಿನೇಶ್ ಕೊಯಿಲ,ನಗರ ಕಾರ್ಯದರ್ಶಿ ಅಖಿಲಾಷ್, ಕಾಲೇಜು ಘಟಕದ ಅದ್ಯಕ್ಷರಾದ ಗುರುಪ್ರಸಾದ್ ಸಿದ್ದಕಟ್ಟೆ, ನಗರ ಸಹ ಕಾರ್ಯದರ್ಶಿಗಳಾದ ನಾಗರಾಜ್ ಶೆಣೈ ,ಗಗನ್ ,ಪ್ರಶಾಂತ್ ಅಜ್ಜಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.