ಬಂಟ್ವಾಳ: ಬಂಟ್ವಾಳ ಬೈಪಾಸಿನಲ್ಲಿರುವ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಆರೋಗ್ಯ ಇಲಾಖೆ, ಪುರಸಭೆ ಬಂಟ್ವಾಳ, ಅಂಗನವಾಡಿ ಕೇಂದ್ರ ಬಿ ಕಸಬ ವಲಯ, ಬಾಲ ವಿಕಾಸ ಸಮಿತಿ ಹೊಸ್ಮಾರು ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಶೋರಿಯರಿಗೆ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಬೀಳ್ಕೊಡುಗೆ ಸಮಾರಂಭವೂ ನಡೆದವು. ಬ್ಯಾಂಕಿನ ಜನರಲ್ ಮ್ಯಾನೇಜರ್ ಭೋಜ ಕುಲಾಲ್ ಅಧ್ಯಕ್ಷತೆ ವಹಿಸಿದ್ದು, ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಶ್ಯಾಮಲಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ರವೀಂದ್ರ ಕಂಬಳಿ ಉಪಸ್ಥಿತರಿದ್ದರು. ಪುರಸಭೆ ಸದಸ್ಯೆ ದೇವಕಿ, ಬಾಲವಿಕಾಸ ಸಮಿತಿ ಸದಸ್ಯರಾದ ಉಮೇಶ ಆಚಾರ್ಯ, ಹಿರಿಯ ಮೇಲ್ವಿಚಾರಕಿ ಶಾಲಿನಿ, ಸಂಪನ್ಮೂಲ ವ್ಯಕ್ತಿಗಳಾದ ಗೀತಾ, ಉಪಸ್ಥಿತರಿದ್ದರು.
ವಿವಿಧ ಬಗೆಯ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ, ಪೌಷ್ಟಿಕ ಆಹಾರದ ಕುರಿತಾದ ಮಾಹಿತಿ, ಸಾಂತ್ವನ ಕೇಂದ್ರದ ಬಗ್ಗೆ ಸ್ಥೂಲ ಪರಿಚಯ, ಕಿಶೋರಿಯರಿಗೆ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಹೊಸ್ಮಾರು ನಿವೃತ್ತಿ ಹೊಂದಿದ ಅಂಗನವಾಡಿ ಸಹಾಯಕಿ ಯಮುನಾ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಪೋಷಣೆ ಮಾಸಾಚರಣೆ ಅಂಗವಾಗಿ ವಿವಿಧ ಪೋಸ್ಟರುಗಳನ್ನು ಪ್ರದರ್ಶಿಸಿ ಛಾಯಾಚಿತ್ರ ತೆಗೆಯುವಿಕೆ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆ ವಿಜಯವಾಣಿ ಶೆಟ್ಟಿ ನಿರೂಪಿಸಿದರು. ಮೋಹಿನಿ ಸ್ವಾಗತಿಸಿದರು. ಭಾರತಿ ಕುದನೆಗುಡ್ಡೆ ವಂದಿಸಿದರು.