ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಮಂಜೂರು ಮಾಡುವ ಹಿನ್ನೆಲೆಯಲ್ಲಿ 94ಸಿ ಹಕ್ಕುಪತ್ರ ವಿತರಣೆ ಮತ್ತಿತರ ಸಂದರ್ಭ ಅರಣ್ಯ ಇಲಾಖೆಗೆ ಸೇರಿದ ಭೂಮಿಯಿಂದಾಗಿ ಸಮಸ್ಯೆಗಳು ಉಂಟಾಗುತ್ತಿರುವ ವಿಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸುವುದಾಗಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಹೇಳಿದ್ದಾರೆ.
ಬುಧವಾರ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಮಾತನಾಡಿದ ಅವರು, ಭೂಮಿ ಮಂಜೂರಾತಿ ಸಂದರ್ಭ ಇಂಥ ತೊಡಕುಗಳು ಬಂದಿರುವುದು ತನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೆ ನಡೆಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಹಸೀಲ್ದಾರ್ ಹೇಳಿದರು.
ಸ್ಥಳ ತನಿಖೆ ಸಂದರ್ಭ ಕಾಯಬೇಕೆಂದಿಲ್ಲ:
ಸ್ಥಳ ತನಿಖೆ, ಪರಿಶೀಲನೆಗೆಂದು ತಾನು ತೆರಳುವ ಸಂದರ್ಭ ಅಲ್ಲಿ ಮನೆಯವರು ಕೆಲಸವನ್ನು ಬಿಟ್ಟು ನಿಲ್ಲಬೇಕು ಎಂದೇನೂ ಇಲ್ಲ ಎಂದು ಹೇಳಿದ ತಹಸೀಲ್ದಾರ್, ಕಂದಾಯ ಇಲಾಖೆಯಲ್ಲಿ ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿ ಆಗುವಂತೆ ನಿರ್ದೇಶಿಸಲಾಗಿದೆ ಎಂದರು.
‘ವಿವಿಧ ವಿಷಯಗಳ ಬಗ್ಗೆ ಜಿಪಂ ಸದಸ್ಯ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ತಾಪಂ ಸದಸ್ಯರಾದ ಎ.ಆರ್.ಹೈದರ್ ಕೈರಂಗಳ, ಸಂಜೀವ ಪೂಜಾರಿ, ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಯಶವಂತ ಪೊಳಲಿ, ಆದಂ ಕುಂಞ, ನಾರಾಯಣ ಶೆಟ್ಟಿ, ಕವಿತಾ ನಾಯ್ಕ, ಮಹಾಬಲ ಆಳ್ವ, ಗೀತಾ ಚಂದ್ರಶೇಖರ್, ಪದ್ಮಾವತಿ ಬಿ ಮಾತನಾಡಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್. ವೇದಿಕೆಯಲ್ಲಿದ್ದರು.