ಬಂಟ್ವಾಳ: ಮಾದಕ ವಸ್ತುಗಳ ಬಳಕೆ ತಪ್ಪಿಸಲು ಡ್ರಗ್ಸ್ ದುರ್ಬಳಕೆ ವಿರುದ್ಧ ಇರುವ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರುವಂತೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಒತ್ತಾಯಿಸಿದೆ. ಸಮಾಜಬಾಹಿರ ಕೃತ್ಯವೆಸಗುವವರನ್ನು ನಿಯಂತ್ರಿಸಲು ಇರುವ ಕಾಯ್ದೆಗಳ ಕಟ್ಟುನಿಟ್ಟು ಜಾರಿಯಾಗಬೇಕು ಎಂದು ಒತ್ತಾಯಿಸಿರುವ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಈ ಕುರಿತು ಸರ್ಕಾರದ ಬಳಿ ನಿಯೋಗವೊಂದು ತೆರಳಲಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಬಂಟ್ವಾಳದಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆಯಿತು.
ಈ ಸಂದರ್ಭ ಜನಜಾಗೃತಿ ವೇದಿಕೆ ಕಾರ್ಯಚಟುವಟಿಕೆಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಪಾಯ್ಸ್, ದುಶ್ಚಟಮುಕ್ತ ರಾಜ್ಯ ಘೋಷಣೆಯಡಿ ಈಗ ನಡೆಯುತ್ತಿರುವ ತನಿಖೆಯನ್ನು ನಿಷ್ಪಕ್ಷಪಾತವಾಗಿಸಬೇಕು, ಮಾದಕ ದ್ರವ್ಯ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು, ಅದಕ್ಕೆ ಅಂತರ್ಜಾಲ ಬಳಕೆಯಾಗುತ್ತಿದೆ. ಹೆಣ್ಣುಮಕ್ಕಳ ಸಹಿತ ಯುವಜನತೆ, ಸೆಲೆಬ್ರಿಟಿಗಳು ಇದರ ಪಿಡುಗಿನೊಳಗೆ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಮೆಡಿಕಲ್ ಶಾಪ್ ನವರು ಕಾಯ್ದೆ ಪ್ರಕಾರ ಔಷಧ ವಿತರಿಸುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಪತ್ತು ನಿರ್ವಹಣೆಗೆ ಯೋಜನೆಯ ತಂಡ: ವಿಪತ್ತುಗಳು ಬಂದಾಗ ಸರ್ಕಾರದ ತಂಡಗಳಿಗೆ ಪೂರಕವಾಗಿ ಶ್ರೀ ಕ್ಷೇತ್ರ ಯೋಜನೆಯ ತಂಡವೂ ಕಾರ್ಯನಿರ್ವಹಿಸಲಿದೆ. ಈ ಕುರಿತು ಯುವಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಮಾಡಲಿದೆ ಎಂದವರು ಹೇಳಿದರು. ಕೋವಿಡ್ ಕಠಿಣ ಪರಿಸ್ಥಿತಿಯಲ್ಲಿ ಮಾಸಾಶನ ನೀಡುವ ಕಾರ್ಯವನ್ನು ಯೋಜನೆ ಮಾಡಿದ್ದು, ಗಾಂಧಿ ಜಯಂತಿ ಕಾರ್ಯಕ್ರಮವನ್ನು ಈ ಬಾರಿ ಸರಳವಾಗಿ ಆಚರಿಸಲಾಗುವುದು ಎಂದರು.
ಈ ಸಂದರ್ಭ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಎ.ರಾಮಚಂದ್ರ, ಕಾರ್ಯದರ್ಶಿ ಸತೀಶ್ ಶೆಟ್ಟಿ, ಪ್ರಮುಖರಾದ ಎ.ರುಕ್ಮಯ ಪೂಜಾರಿ, ಮಹಾಬಲ ಚೌಟ, ವಿಶ್ವನಾಥ ರೈ ಕಳಂಜ, ಅಶ್ವತ್ಥ ಪೂಜಾರಿ, ಶಾರದಾ ರೈ, ಮಹಾಬಲ ರೈ ಉಪಸ್ಥಿತರಿದ್ದರು, ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಯೋಜನಾಧಿಕಾರಿ ಜಯಕರ್ ಸ್ವಾಗತಿಸಿದರು.