ಬಂಟ್ವಾಳ ತಾಲೂಕಿನಲ್ಲಿ ಈವರೆಗೆ 2708 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 788 ಸಕ್ರಿಯ ಪ್ರಕರಣಗಳು ಈಗಿವೆ. ಇವರ ಪೈಕಿ 698 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. 64 ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 21 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕಿಗೊಳಪಟ್ಟ 66 ಮಂದಿ ಸಾವನ್ನಪ್ಪಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರು ಬುಧವಾರ ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಅಂಕಿ ಅಂಶಗಳು ಇವು.
ಕೊರೊನಾ ಸೋಂಕಿಗೊಳಪಟ್ಟು ಅದರ ಸೈಡ್ ಎಫೆಕ್ಟ್ ಗಳ ಕುರಿತು ವಿವಿಧ ಚರ್ಚೆಗಳೂ ಈ ಸಂದರ್ಭ ನಡೆದವು. ಆಯುಷ್ಮಾನ್ ಕಾರ್ಡ್ ವಿವರಗಳ ಕುರಿತು ಚರ್ಚೆ ನಡೆದರೆ, ವಿದ್ಯಾಗಮ ಯೋಜನೆಯಿಂದ ಮಕ್ಕಳು ಸರಿಯಾದ ಶಿಕ್ಷಣವನ್ನು ಪಡೆಯುತ್ತಿಲ್ಲ ಎಂಬ ಆತಂಕವನ್ನೂ ಕೆಲ ಸದಸ್ಯರು ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ, ವಿದ್ಯಾಗಮ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ತಲುಪುವ ಕೆಲಸವನ್ನು ಶಿಕ್ಷಣ ಇಲಾಖೆ ನಡೆಸಿದ್ದು, ಎಲ್ಲೆಲ್ಲಿ ಸಮಸ್ಯೆ ಇದೆಯೋ ಆ ಭಾಗಗಳಲ್ಲಿ ವಿದ್ಯಾರ್ಥಿಗಳನ್ನು ತಲುಪುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಅಧಿಕಾರಿಗಳಿಗೆ ಅಭಿನಂದನೆ: ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿ ಸಹಿತ ಎಲ್ಲ ವಿಭಾಗಗಳ ಅಧಿಕಾರಿಗಳು ಕಾರ್ಯನಿರ್ವಹಿಸಿದ ರೀತಿಗೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸಹಿತ ಎಲ್ಲ ಸದಸ್ಯರು ಅಭಿನಂದಿಸಿದರು. ಈ ವೇಳೆ ಸಹಕರಿಸಿದ ಜನಪ್ರತಿನಿಧಿಗಳಿಗೂ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು.
ವಿವಿಧ ವಿಷಯಗಳ ಬಗ್ಗೆ ಜಿಪಂ ಸದಸ್ಯ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ತಾಪಂ ಸದಸ್ಯರಾದ ಎ.ಆರ್.ಹೈದರ್ ಕೈರಂಗಳ, ಸಂಜೀವ ಪೂಜಾರಿ, ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಯಶವಂತ ಪೊಳಲಿ, ಆದಂ ಕುಂಞ, ನಾರಾಯಣ ಶೆಟ್ಟಿ, ಕವಿತಾ ನಾಯ್ಕ, ಮಹಾಬಲ ಆಳ್ವ, ಗೀತಾ ಚಂದ್ರಶೇಖರ್, ಪದ್ಮಾವತಿ ಬಿ ಮಾತನಾಡಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್. ವೇದಿಕೆಯಲ್ಲಿದ್ದರು.