ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು, ಬಂಟ್ವಾಳ ತಾಲೂಕಿನಲ್ಲೂ ಶುಕ್ರವಾರ ರಾತ್ರಿಯಿಂದೀಚೆಗೆ ನಿರಂತರವಾಗಿ ಮಳೆ ಸುರಿದ ಪರಿಣಾಮ, ಕೃಷಿ ಕಾರ್ಯಗಳಿಗೆ ತೊಡಕಾಗಿದೆ. ಕೆಲವೆಡೆ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮಲೆತಡ್ಕ ಎಂಬಲ್ಲಿ ಮಳೆಯಿಂದಾಗಿ ಮೊದಲೇ ಹದಗೆಟ್ಟಿದ್ದ ಸೇತುವೆಯ ಪಕ್ಕದ ಮಣ್ಣು ಕುಸಿದಿದ್ದು, ಸೇತುವೆಯೂ ಕುಸಿತದ ಭೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪುಣಚದಿಂದ ಸಾರಡ್ಕ ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಈ ಸೇತುವೆ ಕೇರಳ ಕರ್ನಾಟಕವನ್ನು ಸಂಪರ್ಕಿಸುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲು ಇಲಾಖೆ ಸೂಚಿಸಿದ್ದು, ವಿಟ್ಲ ಪೊಲೀಸರು ಅಪಾಯಸೂಚಕ ಪಟ್ಟಿ ಕಟ್ಟಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಯನ್ನು ಎರಡೂ ಭಾಗಗಳಿಂದ ಮುಚ್ಚಿದ್ದಾರೆ.
ಕುಳ ಗ್ರಾಮದ ಮುದಲೆಗುಂಡಿ ಎಂಬಲ್ಲಿ ಗೋಪಾಲ ಭಟ್ಟ ಎಂಬುವರ ಅಡಿಕೆ ತೋಟಕ್ಕೆ ಮಳೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಇದಲ್ಲದೆ ಬಿ.ಸಿ.ರೋಡ್ ಹಾಸನ ಹೆದ್ದಾರಿಯ ಇಕ್ಕೆಲಗಳಲ್ಲೂ ಇದ್ದ ಮಣ್ಣು ರಸ್ತೆಗೆ ಹರಡಿದ ಕಾರಣ, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಯಿತು.