ಸಾಮಾಜಿಕವಾಗಿ ಸಕ್ರಿಯವಾಗಿರುವ ಪೊಲೀಸರು, ಗಣ್ಯ ವ್ಯಕ್ತಿಗಳು, ಸಮಾಜ ಸೇವೆಯಲ್ಲಿ ದುಡಿಯುವವರ ನಕಲಿ ಫೇಸ್ ಬುಕ್ ಖಾತೆಗಳನ್ನು ಮಾಡಿಕೊಂಡು ಹಣಕ್ಕಾಗಿ ಮೆಸೇಜ್ ಮಾಡುವ ಕಿಡಿಗೇಡಿ ಕೃತ್ಯಗಳು ಕೆಲ ತಿಂಗಳಿಂದ ಸಕ್ರಿಯವಾಗಿದೆ.
ಈಗಾಗಲೇ ಹಲವರು ಈ ಕುರಿತು ಫೇಸ್ ಬುಕ್ ನಲ್ಲೇ ಬರೆದುಕೊಂಡಿದ್ದು, ತಾವು ಹಣದ ವ್ಯವಹಾರ ಮಾಡುವಾಗ ಎಚ್ಚರದಲ್ಲಿರಿ, ಅಂಥದ್ದೇನಾದರೂ ಇದ್ದರೆ ಪೊಲೀಸ್ ಸ್ಟೇಶನ್ ಗೆ ದೂರು ಕೊಡಿ ಎಂದು ಸೂಚಿಸಿದ್ದಾರೆ. ವಿಶೇಷವಾಗಿ ಪೊಲೀಸರ ಹೆಸರಲ್ಲಿ ಇಂಥದ್ದೊಂದು ಅಕೌಂಟ್ ಸೃಷ್ಟಿಯಾಗುವುದನ್ನು ಕೆಲ ದಿನಗಳ ಹಿಂದೆ ಎಸ್.ಐ. ಒಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದೀಗ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಅವರ ಫೇಸ್ ಬುಕ್ ನ ಖಾತೆಯಂತೆಯೇ ಹೋಲುವ ನಕಲಿ ಖಾತೆ ಸೃಷ್ಟಿಯಾಗಿದ್ದು ಅವರ ಗಮನಕ್ಕೆ ಬಂದಿದ್ದು, ಕೂಡಲೇ ಅದನ್ನು ಬ್ಲಾಕ್ ಮಾಡಿಸಿ, ರಿಪೋರ್ಟ್ ಮಾಡಿಸಿದ್ದಾರೆ. ಈ ಕುರಿತು ಸೈಬರ್ ಠಾಣೆಗೆ ದೂರನ್ನೂ ಅವರು ನೀಡಿದ್ದಾರೆ.
ಹಣ ಕೇಳ್ತಾರೆ: ನಕಲಿ ಖಾತೆ ಸೃಷ್ಟಿಸಿದಾತ, ಮೊದಲು ಇದ್ದವರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ತಮ್ಮ ಪರಿಚಿತರೇ ರಿಕ್ವೆಸ್ಟ್ ಕಳುಹಿಸುತ್ತಾರೆಂದು ಸ್ನೇಹಿತರು accept ಮಾಡುತ್ತಾರೆ. ಬಳಿಕ ನಿಧಾನವಾಗಿ ಮೆಸೆಂಜರ್ ಮೂಲಕ ಮಾತಿಗಿಳಿಯುತ್ತಾರೆ. ಮೆಸೆಂಜರ್ ನಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಫೋನ್ ಪೇ, ಗೂಗಲ್ ಪೇಯಲ್ಲಿ ಪಾವತಿಸಬಹುದು ಎಂದು ಸುಲಭದ ದಾರಿಯನ್ನೂ ತಿಳಿಸುತ್ತಾರೆ. ಅನುಮಾನವೇ ಬಾರದೆ, ದೂರವಾಣಿಯಲ್ಲಿ ಮಾತನಾಡದಿದ್ದರೆ, ನೀವು ಹಣ ಕಳೆದುಕೊಳ್ಳುತ್ತೀರಿ. ಅನುಮಾನ ಬಂದರೆ ವಿಷಯ ಬೆಳಕಿಗೆ ಬರುತ್ತದೆ. ಕೂಡಲೇ ಜಾಗೃತರಾಗುವ ನಕಲಿ ಖಾತೆದಾರ ಅಕೌಂಟ್ ಮುಚ್ಚಿ ಪರಾರಿಯಾಗುತ್ತಾನೆ.
ಈ ಕುರಿತು ಫೇಸ್ ಬುಕ್ ನ ತನ್ನ ಖಾತೆಯಲ್ಲಿ ಬರೆದುಕೊಂಡಿರುವ ಎಸ್.ಐ, ಸ್ನೇಹಿತರೆ ನನ್ನ ಹೆಸರಿನಲ್ಲಿ ಯಾರೊ ಫೇಕ್ ಅಕೌಂಟ್ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ದಯವಿಟ್ಟು ಅದನ್ನ ಅಕ್ಸೆಪ್ಟ್ ಮಾಡಬೇಡಿ ಮತ್ತು ಅವರಿಂದ ಮೊಸಕ್ಕೆ ಒಳಗಾಗಬೇಡಿ ನಿಮಗೆ ಯಾವುದಾದರು ಮೆಸೇಜ್ ಕಳುಹಿಸಿದರೆ ನನ್ನ ಗಮನಕ್ಕೆ ತನ್ನಿ ಎಂದಿದ್ದಾರೆ.
ಎಚ್ಚರಿಕೆ ಅಗತ್ಯ: ಫೇಸ್ ಬುಕ್ ಬಳಕೆದಾರರು ಎಚ್ಚರಿಕೆಯಿಂದಿರಬೇಕು. ಬಹಳಷ್ಟು ಬಾರಿ ನಿಮ್ಮ ಪರಿಚಿತರ ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಯಾಗುತ್ತಿದ್ದು, ಅವರದ್ದೇ ಫೊಟೋ ಬಳಸಿ ನಿಮ್ಮ ಬಳಿ ಹಣ ಕೇಳಲಾಗುತ್ತಿದೆ ಎಂಬುದು ಗಮನದಲ್ಲಿಟ್ಟುಕೊಳ್ಳಿ. ಫೇಸ್ ಬುಕ್ ನಲ್ಲಿರುವ ಸುರಕ್ಷತಾ ಕ್ರಮವನ್ನು ಅನುಸರಿಸಿ, ಪ್ರೊಫೈಲ್ ಲಾಕ್ ಮಾಡಿ, ಪರಿಚಯ ಇಲ್ಲದವರ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬೇಡಿ, ನಿಮ್ಮ ಪಾಸ್ವರ್ಡ್ ಆಗಿ ದೂರವಾಣಿ ಸಂಖ್ಯೆ ನೀಡದಿರಿ, ಅನುಮಾನಗಳಿದ್ದರೆ, ಫೇಸ್ ಬುಕ್ ಗೆ ರಿಪೋರ್ಟ್ ಕಳಿಸಿ. ಡಮ್ಮಿ ಅಕೌಂಟ್ ಕಂಡುಬಂದರೆ, ಕನಿಷ್ಠ 100 ಮಂದಿ ಅದನ್ನು ರಿಪೋರ್ಟ್ ಮಾಡಿದರೆ ಬ್ಲಾಕ್ ಆಗುತ್ತದೆ. ನಿಮಗೆ ಯಾರಾದರೂ ಈ ಕುರಿತು ಮೋಸ ಮಾಡುತ್ತಿದ್ದಾರೆ ಅನಿಸಿದರೆ, ಹತ್ತಿರದ ಪೊಲೀಸ್ ಠಾಣೆಗೆ ಕೂಡಲೇ ಸಂಪರ್ಕಿಸಿ, ಪೊಲೀಸರ ಸಹಾಯವನ್ನು ಪಡೆದುಕೊಳ್ಳಿ.