ಬಂಟ್ವಾಳ: ಬಂಟ್ವಾಳ ತಾಲೂಕಿನ ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಕನ್ಯಾ ಮಾತೆಯ ಹುಟ್ಟುಹಬ್ಬದ ದಿನವಾದ (ಮೊಂತಿ ಫೆಸ್ತ್ ) ತೆನೆಹಬ್ಬ ವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತ ಅವರು, ವಂ. ರೊಯ್ಸ್ಟನ್ ಮತ್ತು ಭಕ್ತರೊಂದಿಗೆ ಬಲಿಪೂಜೆಯನ್ನು ಅರ್ಪಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಆದೇಶದಂತೆ ಕನ್ಯಾಮಾತೆಯ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದನ್ನು ರದ್ದುಪಡಿಸಲಾಗಿತ್ತು. ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಕ್ತಿಯಿಂದ, ಸಾಮಾಜಿಕ ಅಂತರದಿಂದ ಪಾಲ್ಗೊಳ್ಳಲು ಬೇಕಾದ ಆಸನದ ವ್ಯವಸ್ಥೆಯನ್ನು ಚರ್ಚ್ ವಠಾರದಲ್ಲಿ ಆಯೋಜಿಸಿ, ಎಲ್ ಇ ಡಿ ಪರದೆಯನ್ನು ಅಳವಡಿಸಲಾಯಿತು. ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತೆನೆಯನ್ನು ನೀಡಿ ಗೌರವಿಸಲಾಯಿತು. ಬಲಿ ಪೂಜೆ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಉಪಹಾರ , ಹಾಗೂ ಕಬ್ಬನ್ನು ನೀಡಲಾಯಿತು. ಮಾತೆ ಮರಿಯಮ್ಮನವರ ಪಲ್ಲಕ್ಕಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್ ಪಾಲನಾ ಮಂಡಳಿ ಸಂಭ್ರಮದ ನೇತೃತ್ವ ವಹಿಸಿದ್ದರು. ಧರ್ಮಗುರುಗಳು ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ವಂದಿಸಿದರು.