ಬಂಟ್ವಾಳ: ಕೆಎಂಸಿಯ ಹ್ರದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ಸ್ಥಾಪಿಸಿದ ಕಾರ್ಡಿಯಾಲಜಿ ಎಟ್ ಡೋರ್ ಸ್ಪೆಪ್ಸ್ ಫೌಂಡೇಶನ್ ಎಂಬ ಯೋಜನೆ (ಕ್ಯಾಡ್)ಯನ್ವಯ ಮಂಗಳವಾರ ಬಂಟ್ವಾಳ ತಾಲೂಕಿನ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ಉಚಿತವಾಗಿ ಒದಗಿಸಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು. ರಾಜ್ಯದ 20 ಜಿಲ್ಲೆಗಳಲ್ಲಿ ಕ್ಯಾಡ್ ವತಿಯಿಂದ ಯಂತ್ರಗಳನ್ನು ಒದಗಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಈಗಾಗಲೇ 12 ಇಸಿಜಿ ಯಂತ್ರಗಳನ್ನು ನೀಡಿದ್ದು, ಇಂದು ನೀಡಿದ ಯಂತ್ರಗಳಲ್ಲಿ 2 ಬಂಟ್ವಾಳ ಮತ್ತು ಉಳಿದ 3ನ್ನು ಇತರೆ ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ಇದರೊಂದಿಗೆ ಬಂಟ್ವಾಳದಲ್ಲಿ ಒಟ್ಟು 17 ಇಸಿಜಿ ಯಂತ್ರಗಳನ್ನು ಕ್ಯಾಡ್ ವತಿಯಿಂದ ನೀಡಿದಂತಾಗಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಗೆ ಕ್ಯಾಡ್ ನ ಪರವಾಗಿ ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್ ಯಂತ್ರಗಳನ್ನು ಹಸ್ತಾಂತರಿಸಿದರು. ಇದೇ ವೇಳೆ 35ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ-2020ಯನ್ವಯ ಮಾಹಿತಿ ಕಾರ್ಯಕ್ರಮ ನಡೆಯಿತು. ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್, ಬಿಪಿಎಲ್ ಮೆಡಿಕಲ್ ಟೆಕ್ನಾಲಜೀಸ್‌ನ ರಾಕೇಶ್, ಗುರುರಾಜ್ ರೈ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಆಸ್ಪತ್ರೆಯ ಸಿಬಂದಿ ಸುರೇಶ್ ಪರ್ಕಳ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ 2 ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗುವುದು, ಅಗತ್ಯವಿರುವ ಅವಶ್ಯಕತೆಗಳನ್ನು ಪೂರೈಸಲಾಗುವುದು, ಇದೀಗ ಆಸ್ಪತ್ರೆಯಲ್ಲಿ ಪೂರ್ಣಪ್ರಮಾಣದಲ್ಲಿ ವೈದ್ಯರ ತಂಡವಿದೆ ಎಂದರು. ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಪುಷ್ಪಲತಾ ಆಸ್ಪತ್ರೆಗೆ ಮಲ್ಟಿ ಪ್ಯಾರಮೀಟರ್, ಅನಸ್ತೇಶಿಯಾ ಮೆಷಿನ್‌ಗಳ ಬೇಡಿಕೆ ಸಲ್ಲಿಸಿದರು.