ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ (79 ವರ್ಷ) ಶನಿವಾರ ಮಧ್ಯರಾತ್ರಿ ಎಡನೀರು ಮಠದಲ್ಲಿ ವಿಧಿವಶರಾದರು. ಸೆ.2ರಂದು ಚಾತುರ್ಮಾಸ್ಯವನ್ನು ಪೂರೈಸಿದ್ದ ಶ್ರೀಗಳು ಕಳೆದ ಕೆಲವು ದಿನಗಳಿಂದ ಅಲ್ಪ ಅಸೌಖ್ಯದಲ್ಲಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ ಫಲಾಹಾರ ಸ್ವೀಕರಿಸಿದ್ದ ಶ್ರೀಗಳು ಮಧ್ಯರಾತ್ರಿಯ ವೇಳೆ ಅಸ್ತಂಗತರಾಗಿದ್ದಾರೆ. 1960ರಿಂದ ಎಡನೀರು ಮಠಾಧಿಶರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದ ಅವರು ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಠದ ಮೂಲಕ ಕೊಡುಗೆ ನೀಡಿದ್ದರು. ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಕೇಂದ್ರವಾಗಿ ಎಡನೀರು ಗುರುತಿಸಲ್ಪಟ್ಟಿತ್ತು.
ಯಕ್ಷಗಾನದ ಮೇಲೆ ಅತೀವ ಆಸಕ್ತಿ ಹೊಂದಿದ್ದ ಶ್ರೀಗಳು ಯಕ್ಷಗಾನ ಮೇಳವನ್ನು ಕಟ್ಟಿ ನೂರಾರು ಕಲಾವಿದರ ಪೋಷಕರಾಗಿದ್ದರು. ಸ್ವತಃ ಭಾಗವತರಾಗಿ ಯಕ್ಷಗಾನ ರಂಗಸ್ಥಳದಲ್ಲಿ ಮಿಂಚಿದ್ದ ಎಡನೀರು ಶ್ರೀಗಳು ಸಂಗೀತ, ನೃತ್ಯ ಕಲಾರಾಧನೆಗೂ ಪ್ರೋತ್ಸಾಹ ನೀಡುತ್ತಿದ್ದರು.
ಶ್ರೀಗಳು, ಪ್ರತೀ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು.ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಶವಾನಂದ ಸ್ವಾಮೀಜಿಯವರ ಹೆಸರು ಚಿರಸ್ಥಾಯಿಯಾಗಿದೆ. ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ಭಾರಿ ಪ್ರಸಿದ್ಧಿ ಪಡೆದಿತ್ತು. ದೇಶದಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅತೀ ಅಪರೂಪ ಎಂಬಂತೆ 13 ಮಂದಿ ನ್ಯಾಯಾಧೀಶರ ಪೀಠ ರಚಿಸಿ ಕೈಗೊಂಡಿತ್ತು.