ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸರಳವಾಗಿ ನಡೆಯಿತು. ಈ ಸಂದರ್ಭ ನಿವೃತ್ತರಾದ 60 ಶಿಕ್ಷಕರಿಗೆ ಸನ್ಮಾನ, ಸಾಧಕ ಶಿಕ್ಷಕರಿಗೆ ಗೌರವಾರ್ಪಣೆ ನಡೆದವು.
2019ನೇ ಸಾಲಿನ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತರಾದ ತಾರಾನಾಥ ಕೈರಂಗಳ, ದೊಡ್ಡಕೆಂಪಯ್ಯ, ತ್ರಿವೇಣಿ, ತಾಲೂಕು ಶಿಕ್ಷಕರ ದಿನಾಚರಣೆ ಅನುಷ್ಠಾನ ಸಮಿತಿ ಆಯ್ಕೆ ಮಾಡಿದ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಅಬುಬಕ್ಕರ್ ಸಿದ್ದೀಕ್, ರಾಜಗೋಪಾಲ ಜೋಷಿ, ಜೆಸಿಂತಾ ಥೆರೆಸಾ ಲೊಬೊ, ಅಬುಬಕ್ಕರ್ ಅಶ್ರಫ್ ಅವರನ್ನು ಆಯ್ಕೆ ಮಾಡಲಾಗಿದ್ದು ಅವರನ್ನು ಗೌರವಿಸಲಾಯಿತು.
ಇವರೊಂದಿಗೆ 2019-20ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ 60 ಶಿಕ್ಷಕರನ್ನು ಸತ್ಕರಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ದಿನಾಚರಣೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಕೆಲಸ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಕೋವಿಡ್ ನ ಕಠಿಣ ಪರಿಸ್ಥಿತಿಯ ಸಂದರ್ಭ ಬಂಟ್ವಾಳ ತಾಲೂಕಿನ ಶಿಕ್ಷಕರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್.ಮುಹಮ್ಮದ್, ರವೀಂದ್ರ ಕಂಬಳಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ನಾರಾಯಣ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪಸ್ಥಿತರಿದ್ದರು. ತಾಲೂಕು ಶಿಕ್ಷಕರ ದಿನಾಚರಣೆ ಅನುಷ್ಠಾನ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸ್ವಾಗತಿಸಿದರು. ಬಿಇಒ ಕಚೇರಿಯ ಶಿಕ್ಷಣ ಸಂಯೋಜಕಿ ಸುಜಾತಾ ಸಾಧಕ ಶಿಕ್ಷಕರ ಪರಿಚಯ ಮಾಡಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಅಧಿಕಾರಿ ರಾಧಾಕೃಷ್ಣ ಭಟ್ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.