ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು, ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಮೂಲಕ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚಕ್ಕೆ ಬಡವರು ತೊಂದರೆಗೀಡಾಗುವುದನ್ನು ತಪ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಡಿವೈಎಫ್ಐ ಮಾಡಿದೆ.
ಮಂಗಳವಾರ ಬಂಟ್ವಾಳ ತಹಸೀಲ್ದಾರ್ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಚಿಕಿತ್ಸೆಯ ನೆಪದಲ್ಲಿ ಜನಸಾಮಾನ್ಯರಿಂದ ಹಣ ಲೂಟಿಯಾಗುತ್ತಿದ್ದು, ಇದರ ಬದಲು ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿರಿ , ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿರಿ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಗೆ ಒಳಪಡುವ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿರಿ ಹಾಗೂ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಆಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಲಾಯಿತು. ನಿಯೋಗದಲ್ಲಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ಸಲಹೆಗಾರರಾದ ರಾಜಾ ಚೆಂಡ್ತಿಮಾರ್, ತಾಲೂಕು ಆಧ್ಯಕ್ಷರಾದ ಸುರೆಂದ್ರ ಕೋಟ್ಯಾನ್, ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ನ್ಯಾಯವಾದಿ ಮಹಮ್ಮದ್ ಗಝಾಲಿ ಮುಂತಾದವರು ಇದ್ದರು.