ಕೇಂದ್ರ ಹಾಗೂ ರಾಜ್ಯದ ಅಸಮರ್ಪಕ ಧೋರಣೆ ಮತ್ತು ಆಡಳಿತದಿಂದ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ನ್ಯಾಯವಾದಿ, ನೋಟರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ ಪೂಜಾರಿ ಆರೋಪಿಸಿದ್ದಾರೆ.
ಕೊರೊನಾ ಸಂದರ್ಭ ಕೇಂದ್ರ ಸರ್ಕಾರ ಸಂಪೂರ್ಣ ಲಾಕ್ ಡೌನ್ ಮಾಡಿದ್ದು, ಇದರಿಂದ ನಿರ್ಮಾಣವಾದ ಆರ್ಥಿಕ ಪರಿಸ್ಥಿತಿ ಪರಿಹರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದ ದೇಶದ ವ್ಯಾಪಾರ ವಹಿವಾಟು ಸೇರಿದಂತೆ ಸಂಪೂರ್ಣ ಜನಜೀವನ ಕಷ್ಟವಾಗಿದೆ. ಬ್ಯಾಂಕ್ ಸಾಲ ಮಾಡಿ ಮನೆ ನಿರ್ಮಾಣ, ವ್ಯಾಪಾರ, ಸಣ್ಣ ಉದ್ಯಮ ಮಾಡಿಕೊಂಡಿರುವ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಕೆಲವು ತಿಂಗಳು ವಿನಾಯಿತಿ ಘೋಷಿಸಿದ್ದು, ಆಗಸ್ಟ್ ತಿಂಗಳ ಅಂತ್ಯಕ್ಕೆ ಮುಗಿಯಲಿದೆ. ಬಾಕಿ ಉಳಿಸಿಕೊಂಡಿರುವ ಸಾಲಗಾರರು ಸೆಪ್ಟೆಂಬರ್ ತಿಂಗಳಿಂದ ಸಾಲ ಮರುಪಾವತಿ ಮಾಡಬೇಕು. ಕೊಟ್ಟ ವಿನಾಯಿತಿಗೆ ಕಂತಿನ ಬಡ್ಡಿಯನ್ನು ಕಟ್ಟಬೇಕಾಗಿದೆ. ಇದರಿಂದ ಸಾಲಗಾರರು ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿನ ಕಂತಿನ ಹಾಗೂ ಬಡ್ಡಿ ವಿನಾಯತಿ ವಿಚಾರ ನ್ಯಾಯಾಲಯದಲ್ಲಿ ವಿಮರ್ಶೆಗೆ ಇರುವುದರಿಂದ ಈ ಸಮಯದಲ್ಲಿ ಒಮ್ಮೆಲೇ ಬಾಕಿ ಹಣ ಹಾಗೂ ಬಡ್ಡಿಯನ್ನು ಕೇಳುವುದು ಸರಿಯಲ್ಲ. ನ್ಯಾಯಾಲಯ ತೀರ್ಪಿನವರೆಗೆ ಇದನ್ನು ಮುಂದೂಡಬೇಕು ಹಾಗೂ 2020ರ ಡಿಸೆಂಬರ್ ಅಂತ್ಯದವರೆಗೆ ಸಾಲದ ಕಂತನ್ನು ಕಟ್ಟುವ ವಿಚಾರದಲ್ಲಿ ವಿನಾಯಿತಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ. ವಿನಾಯಿತಿ ಸಮಯದಲ್ಲಿ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಜನಸಾಮಾನ್ಯರು ಕೊರೊನಾ ಸಮಯದಲ್ಲಿ ಅನುಭವಿಸಿದ ಸಮಸ್ಯೆಗಳಿಗಿಂತ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಜನಸಾಮಾನ್ಯರು ಸರ್ಕಾರದ ವಿರುದ್ಧ ಸಿಡಿದೇಳುವ ಮುನ್ನ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದವರು ಹೇಳಿದ್ದಾರೆ.