ವಿಟ್ಲ: 2020-21 ನೇ ಸಾಲಿನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮಾಹಿತಿ ಕಾರ್ಯಾಗಾರ ವಿಟ್ಲ ಗಜಾನನ ಮಿನಿಹಾಲ್ ನಲ್ಲಿ ನಡೆಯಿತು. ಕೃಷಿ ಉಪ ನಿರ್ದೇಶಕರಾದ ಭಾನುಪ್ರಕಾಶ್ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಗ್ಗೆ ನೇಮಕಗೊಂಡ ಖಾಸಗಿ ನಿವಾಸಿಗಳಿಗೆ ಮೊಬೈಲ್ ಆ್ಯಪ್ ಕಾರ್ಯದ ಬಗ್ಗೆ ತಿಳಿಸಿದರು.
ಈ ವೇಳೆ ಆಪ್ ನಲ್ಲಿರುವ ತಾಂತ್ರಿಕ ಸಮಸ್ಯೆ ಬಗೆಹರಿಸುವ ಕುರಿತು ಸ್ಥಳೀಯರು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ಮಾತನಾಡಿ, ಬೆಳೆ ಸಮೀಕ್ಷೆ ನಡೆಸುವ ಖಾಸಗಿ ನಿವಾಸಿಗಳು, ಸರಕಾರದ ವತಿಯಿಂದ ನೀಡಲ್ಪಡುವ ಗೌರವಧನದ ಜೊತೆಗೆ ಇಲಾಖೆಯೊಂದಿಗೆ ಸೇವಾ ಮನೋಭಾವ ಬೆಳೆಸಿ ಬೆಳೆ ಸಮೀಕ್ಷೆ ಕೆಲಸ ಯಶಸ್ವಿಯಾಗಿ ನಿರ್ವಹಿಸುವಂತೆ ಹೇಳಿದರು. ಸಹಾಯಕ ತೋಟಗಾರಿಕಾ ನಿರ್ದೇಶಕರಾದ ದಿನೇಶ್, ಸಹಾಯಕ ಕೃಷಿ ನಿರ್ದೇಶಕರಾದ ನಾರಾಯಣ ಶೆಟ್ಟಿ, ವಿಟ್ಲ ಆರ್.ಐ. ದಿವಾಕರ್ ಎಂ, ವಿಟ್ಲ ಹೋಬಳಿಯ ಗ್ರಾಮಕರಣಿಕರು, ಗ್ರಾಮಸಹಾಯಕರು ಭಾಗವಹಿಸಿದರು. ವಿಟ್ಲ ಹೋಬಳಿ ಕೃಷಿ ಅಧಿಕಾರಿ ಸರಿಕಾರ್ ಕಾರ್ಯಕ್ರಮ ನಿರ್ವಹಿಸಿದರು, ಕೊಳ್ನಾಡು ಗ್ರಾಮಲೆಕ್ಕಿಗ ಅನಿಲ್ ಕುಮಾರ್ ವಂದನಾರ್ಪಣೆಗೈದರು.