ಬಂಟ್ವಾಳ: ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ, ಅಡಿಕೆ ಪತ್ರಿಕೆ ಪ್ರಕಾಶಕ, ಸಂಪಾದಕ ಮಂಚಿ ಶ್ರೀನಿವಾಸ ಆಚಾರ್ (73) ಇನ್ನಿಲ್ಲ. ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ (ಆಗಸ್ಟ್ 29) ಬೆಳಗ್ಗೆ ನಿಧನ ಹೊಂದಿದರು. ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಪ್ತೇಷ್ಟರನ್ನು ಅಗಲಿದ್ದಾರೆ.
ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಮಂಕುಡೆ ಮನೆತನದ ಮಂಚಿ ಶ್ರೀನಿವಾಸ ಆಚಾರ್ ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಪ್ರಕಾಶಕ ಹಾಗೂ ಸಂಪಾದಕರಾಗಿದ್ದರು. ಪುತ್ತೂರಿನಲ್ಲಿ ಕಚೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ಕಳೆದ ಮೂರು ದಶಕಗಳಿಂದ ಅವರು ಅಡಿಕೆ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ, ಅಡಿಕೆ ಪತ್ರಿಕೆಯ ನಿರ್ವಹಣೆಗಾಗಿ ತಮ್ಮ ಗಣನೀಯ ಕೊಡುಗೆ ಕೊಡುತ್ತಾ ಬಂದಿದ್ದಾರೆ. ಮೃದು ಭಾಷಿ. ಎಲ್ಲರೊಡನೆ ಆತ್ಮೀಯತೆಯಿಂದ ವರ್ತಿಸುತ್ತಿದ್ದ ಹೃದಯ ವೈಶಾಲ್ಯದಿಂದಾಗಿ ಅವರ ಸ್ನೇಹಿತ ವಲಯ ಬಹು ದೊಡ್ಡದು. ಮಂಗಳೂರಿನ ಯೆಯ್ಯಾಡಿಯಲ್ಲಿ ಆಚಾರ್ ಚಿಕ್ಕ ಉದ್ಯಮವನ್ನು ನಡೆಸುತ್ತಿದ್ದರು. ಪುತ್ತೂರಿನಲ್ಲಿ ಕ್ಯಾಂಪ್ಕೋ ವತಿಯಿಂದ ಜರುಗಿದ ಯಂತ್ರಮೇಳಗಳಲ್ಲಿ ಸಕ್ರಿಯವಾಗಿದ್ದರು. ದಕ್ಷಿಣ ಕನ್ನಡದ ಎಲ್ಲಾ ಕೃಷಿ ಸಂಸ್ಥೆಗಳಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು. ತನ್ನ ಮನೆಯ ಒಂದು ಪಾರ್ಶ್ವದಲ್ಲಿ ಪಾರಂಪರಿಕ ಹಳೆಯ ವಸ್ತುಗಳ ಚಿಕ್ಕ ಮ್ಯೂಸಿಯಂ ಮಾಡಿದ್ದರು. ದೇಶ, ವಿದೇಶಗಳ ಅಪ್ಡೇಟ್ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ತನ್ನ ಕುಟುಂಬದ ಕುರಿತಾದ ವಂಶವೃಕ್ಷವನ್ನು ಸಿದ್ಧಪಡಿಸಿದ್ದರು. ಕುಂಟುಂಬ ಸದಸ್ಯರ ಪರಸ್ಪರ ಸಂವಹನಕ್ಕಾಗಿ ’ಪುಳ್ಳಿ ಸಂಘ’ ಎನ್ನುವ ಅವ್ಯಕ್ತ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದರು. ಮೂರ್ನಾಲ್ಕು ವಾರ್ತಾಪತ್ರವನ್ನು ಪ್ರಕಾಶಿಸಿದ್ದರು. ಇವರ ತಂದೆ ಮಂಚಿ ನಾರಾಯಣ ಆಚಾರ್. ಒಂದು ಕಾಲಘಟ್ಟದಲ್ಲಿ ಮಂಚಿಯ ಅಭಿವೃದ್ಧಿಗೆ ದೊಡ್ಡ ಹೆಗಲನ್ನು ನೀಡಿದವರು. ಸಹಕಾರಿ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು. ಕೃಷಿಯಲ್ಲಿ ಹಲವು ಪ್ರಥಮಗಳನ್ನು ಅನುಷ್ಠಾನಿಸಿದವರು. ಮಂಚಿಯ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ನ ಕಾರ್ಯಚಟುವಟಿಕೆಗಳಲ್ಲಿ ಅವರು ಸದಾ ತೊಡಗಿಸಿಕೊಳ್ಳುತ್ತಿದ್ದರು.