ಸಾಧಕರು

ಜೀವನವನ್ನೇ ಸಮಾಜಕ್ಕೆ ಮುಡಿಪಾಗಿಟ್ಟವರು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಉಳುವಾನ ಗಂಗಾಧರ ಭಟ್

ಉಳುವಾನ ಗಂಗಾಧರ ಭಟ್

ಅದು 1963ನೇ ಇಸ್ವಿ. ಚೀನಾ ಆಕ್ರಮಣದ ಕಾಲ. ಸೈನಿಕ ನಿಧಿಗೆ ಸಹಾಯ ಮಾಡಲು ಭಾರತೀಯ ಪ್ರಜೆಗಳು ಸ್ವಯಂಪ್ರೇರಿತರಾಗಿ ಮುಂದೆ  ಬರುತ್ತಿದ್ದ ಹೊತ್ತು. ಆ ಸಂದರ್ಭ  ಸೈನಿಕ ನಿಧಿಗೆ ಸಹಾಯ ಮಾಡಲು ತನ್ನ ಕಿವಿಯಲ್ಲಿದ್ದ ಒಂಟಿಯನ್ನು (ಕಿವಿಯ ಆಭರಣ) ಯಾವುದೇ ಆಲೋಚನೆ ಇಲ್ಲದೆ ಬಿಚ್ಚಿ ದಾನ ಮಾಡಿದ್ದ ಉಳುವಾನ ಗಂಗಾಧರ ಭಟ್ (90) ಇನ್ನಿಲ್ಲ. ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಅವರು ಮಡಿಯಾಲ ನಾರಾಯಣ ಭಟ್ ಅವರ ಜತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದರು.

ತನ್ನ ಜೀವನವನ್ನಿಡೀ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಭ್ಯುದಯಕ್ಕೆ ಮುಡಿಪಾಗಿಟ್ಟ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷರಿವರು.

ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಳಿಕೆ ಸಂಸ್ಥೆಯ ಮೂಲಕ ಸುಮಾರು 70 ವರ್ಷಗಳ ಸುದೀರ್ಘ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ.

1960ರಲ್ಲಿ ಆರಂಭವಾದ ಲೋಕ ಸೇವಾ ವೃಂದದಲ್ಲಿ ಕಾರ್ಯದರ್ಶಿಯಾಗಿದ್ದ ಅವರು, ಬಳಿಕ ಅಳಿಕೆ ಮತ್ತು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌  ಗಂಗಾಧರ ಭಟ್ಟರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.1993ರಲ್ಲಿ ನಡೆದ ಬಂಟ್ವಾಳ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ, 2011ರಲ್ಲಿ ನಡೆದ ದ.ಕ. ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸಾಹಿತ್ಯದ ಕಾರ್ಯ ನಡೆಸಿದ್ದರು. ಅಳಿಕೆ ಪಂಚಾಯತ್ ಹಾಗೂ ಸಹಕಾರಿ ಸಂಘದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.ಅಳಿಕೆ ಹಾಗೂ ಮುದ್ದೇನಹಳ್ಳಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅವರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ, ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶ, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಲ್ಯಾಣ ಮಂಟಪದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನು ಮಾತ್ರವಲ್ಲದೆ, ಉಚಿತ ಆಸ್ಪತ್ರೆ, ಅನಾಥಾಲಯ, ಕೃಷಿ, ಪಶುಸಂಗೋಪನೆ, ಪುಸ್ತಕ ಪ್ರಕಾಶನ, ಪತ್ರಿಕಾ ಪ್ರಸಾರ, ಹಾಸ್ಟೆಲುಗಳು ಇತ್ಯಾದಿಗಳ ನಿರ್ವಹಣೆಯನ್ನು ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ.

1984ರಿಂದ 2015 ವರೆಗೆ ಕನ್ನಡ ಸನಾಥನ ಸಾರಥಿಯ ಸಂಪಾದಕರಾಗಿ, 1977 -1984ರವರೆಗೆ ಸೇವಾಮೃತ ಮಾಸ ಪತ್ರಿಕೆಯ ಸಂಪಾದಕರಾಗಿ, 2016 ರಿಂದ ಸಾಯಿ ಸೇವಾಮೃತದ ಸಂಪಾದಕರಾಗಿ, ಪುಟ್ಟಪರ್ತಿಯಲ್ಲಿ ಜರಗಿದ 50ನೇ ಸನಾಥನ ಸಾರಥಿಯ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದ ಸನಾಥನ ಸಾರಥಿಯ ಸಲಹಾ ಮಂಡಳಿಯ ಸದಸ್ಯರಾಗಿದ್ದರು.

ಪ್ರತೀ ವರ್ಷ ಗಣೇಶ ಹಬ್ಬದಂದು ಹಲವು ಗಣ್ಯರನ್ನು ಆಮಂತ್ರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ವಿಶೇಷವಾಗಿ ಆಚರಿಸುತ್ತಿದ್ದರು. ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಿ ವೈದ್ಯಕೀಯ ಚಿಕಿತ್ಸಾ ಶಿಬಿರ, ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದರು. ಹಿರಣ್ಯ ವೆಂಕಟೇಶ್ವರ ಭಟ್ ಅವರ ಸಂಪಾದಕತ್ವದಲ್ಲಿ ಗಂಗಾಧರ ಭಟ್ಟರ ’ಗಂಗಾಧರ ಗೌರವ’ ಎಂಬ ಅಭಿನಂದನಾ ಗ್ರಂಥ ಬಿಡುಗಡೆಯಾಗಿದೆ.

ಗಣ್ಯರ ಸಂತಾಪ: 

ಗಂಗಾಧರ ಭಟ್ ನಿಧನಕ್ಕೆ ದೇಶ, ವಿದೇಶಗಳಲ್ಲಿರುವ ಅವರ ಅಪಾರ ಶಿಷ್ಯವೃಂದದವರು ಸಂತಾಪ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಗೌರವಸೂಚಕವಾಗಿ ನುಡಿನಮನಗಳು ಸಲ್ಲಿಕೆಯಾಗಿವೆ.

ಒಡಿಯೂರು ಶ್ರೀಗಳ ಸಂತಾಪ:

ಮಡಿಯಾಳ ನಾರಾಯಣ ಭಟ್ಟರ ಬಳಿಕ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಆದುನಿಕ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅನುಪಮ ತ್ಯಾಗಜೀವಿ  ಯು. ಗಂಗಾಧರ ಭಟ್ ಎಂದು ಹೇಳಿರುವ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.

ದೂರದೃಷ್ಟಿಯ ಶಿಕ್ಷಣತಜ್ಞ – ರೈ

ಅವರ ಅಗಲಿಕೆ ತೀವ್ರ ನೋವು ತಂದಿದ್ದು, ಓರ್ವ ದೂರದೃಷ್ಟಿಯ ಶಿಕ್ಷಣ ತಜ್ಞ ರನ್ನು ಕಳೆದಕೊಂಡಿದ್ದೇವೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಭಟ್, ಅಳಕೆಯಂಥ ಹಳ್ಳಿಯಲ್ಲಿ ಶಿಕ್ಷಣ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಒದಗಿಸುವ ಶಿಕ್ಷಣ ಸಂಸ್ಥೆ ಹುಟ್ಟುಹಾಕಿದ್ದರು ಎಂದಿದ್ದಾರೆ. ಅವರೊಂದಿಗಿನ ಒಡನಾಟವನ್ನು ನೆನಪಿಸಿದ ರೈ ಅವರು ವಿದ್ಯಾಸಂಸ್ಥೆ ಯ ಪ್ರತಿಯೊಂದು ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ತಾನು ಭಾಗಿಯಾಗಿದ್ದಾಗಿ ತಿಳಿಸಿದ್ದಾರೆ.

ಕಸಾಪ ಸಂತಾಪ:

ಗಂಗಾಧರ ಭಟ್ ಅವರ ನಿಧನಕ್ಕೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿತು. ಕಸಾಪ ಅಧ್ಯಕ್ಷ ಕೆ. ಮೋಹನ್ ರಾವ್ ಸಂತಾಪ ಸೂಚಿಸಿದರು.ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಪದಾಧಿಕಾರಿಗಳಾದ ಕೊಳಕೆ ಗಂಗಾಧರ ಭಟ್, ನಾಗವೇಣಿ ಮಂಚಿ, ಶಿವಶಂಕರ್ ಸಂತಾಪ ಸೂಚಿಸಿದರು. ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಮೆಲ್ಕಾರ್ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸಂತಾಪ ಸೂಚಿಸಿದ್ದಾರೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts