ಕಾಲಬೆರಳ ಮೂಲಕ ಪರೀಕ್ಷೆ ಬರೆದು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣನಾಗಿ ರಾಜ್ಯದ ಗಮನಸೆಳೆದು ಶಾಲೆಗೆ ಕೀರ್ತಿ ತಂದಿರುವ ಬಂಟ್ವಾಳ ಕಂಚಿಕಾರಪೇಟೆಯ ವಿಶೇಷಚೇತನ ವಿದ್ಯಾರ್ಥಿ ಕೌಶಿಕ್ ಮತ್ತು ಆತನ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮ ಬಂಟ್ವಾಳದ ಶಾಲೆಯಲ್ಲಿ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಸಾಧಕ ಮಾತ್ರವಲ್ಲ ಅತನ ಸಾಧನೆಯ ಹಿಂದಿರುವ ಎಲ್ಲಾ ಅಧ್ಯಾಪಕರನ್ನು ಗುರುತಿಸಿ ಅಭಿನಂದಿಸಿರುವುದನ್ನು ಶ್ಲಾಘಿಸಿ, ಕೌಶಿಕ್ ವಿದ್ಯಾಭ್ಯಾಸಕ್ಕೆ ಸಂಪೂರ್ಣ ನೆರವಾಗುವುದಾಗಿ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟೀನ್ ಡಿಸೋಜ, ಶ್ರೀ ತಿರುಮಲ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣ್ಯೆ, ಮೊಕ್ತೇಸರ ಪ್ರವೀಣ್ ಕಿಣಿ, ದೇವಳದ ಮಾಜಿ ಮೊಕ್ತೇಸರ ವೇ.ಮೂ.ಜನಾರ್ಧನ ಭಟ್ ಅತಿಥಿಗಳಾಗಿದ್ದು,ಶುಭ ಹಾರೈಸಿದರು. ಶಾಲಾ ಸಂಚಾಲಕ ಎ. ಗೋವಿಂದ ಪ್ರಭು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಸುಮಾರು 128 ವರ್ಷಗಳ ಇತಿಹಾಸವಿರುವ ಈ ವಿದ್ಯಾಸಂಸ್ಥೆ ವಿದ್ಯೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು. ಶಾಲಾ ಮಾಜಿ ಸಂಚಾಲಕ ಅರ್ಲ ದಾಮೋದರ ಪ್ರಭು, ಎಸ್ ವಿ ಎಸ್ ದೇವಳ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ, ಎಸ್ ವಿ ಎಸ್ ದೇವಳ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಮ್ಮ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ ಹಾಗೂ ಶಾಲಾ ಆಡಳಿತ ಮಂಡಳಿ ,ಎಜುಕೇಶನ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ಎಸ್ ವಿ ಎಸ್ ದೇವಳ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಸ್ವಾಗತಿಸಿದರು. ಶಿಕ್ಷಕ ದಾಮೋದರ ಪಡಿಯಾರ್ ಕೌಶಿಕ್ ನ ಸಾಧನೆಯ ವಿವರವನ್ನು ಸಭೆಯ ಮುಂದಿಟ್ಟರು. ಶಿಕ್ಷಕ ಶೇಖರ್ .ಬಿ.ವಂದಿಸಿದರು. ಶಿಕ್ಷಕ ಮುರಳೀಧರ್ ನಿರೂಪಿಸಿದರು.
ಕೃತಕ ಕೈ ಘೋಷಣೆ: ಇದೇ ವೇಳೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೌಶಿಕ್ ಗೆ ಶೀಘ್ರದಲ್ಲಿಯೇ ಕೃತಕ ಕೈ ಯನ್ನು ಜೋಡಿಸುವ ಭರವಸೆಯನ್ನು ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ ಕಾರ್ ನೀಡಿದರು.