ತಮ್ಮ ಸಮಸ್ಯೆಗೆ ಜಿಲ್ಲೆಯ ಶಾಸಕರು, ಸಚಿವರು, ಸಂಸದರ ಗಮನಕ್ಕೆ ತಂದರೂ, ಯಾವುದೇ ಸ್ಪಂದನೆ ಸಿಕ್ಕಿಲ್ಲ. 2 ತಿಂಗಳ ವೇತನ ನೀಡಿಲ್ಲ ಎಂದು ಆರೋಪಿಸಿ ಗುತ್ತಿಗೆ ಆಧಾರದಲ್ಲಿ ಮೆಸ್ಕಾಂ ವಿದ್ಯುತ್ ಮಾಪನ ಮಾಡುವ ಕಾರ್ಮಿಕರು ದಲಿತ್ ಸೇವಾ ಸಮಿತಿ ಬೆಂಬಲದೊಂದಿಗೆ ಬಿ.ಸಿ.ರೋಡಿನ ಮೆಸ್ಕಾಂ ಭವನದ ಮುಂಭಾಗ ಮಂಗಳವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ದಲಿತ್ ಸೇವಾ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಆಗಮಿಸಿದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಇಂಟೆಕ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಕಾಂಗ್ರೆಸ್ ಮುಖಂಡ ವೆಂಕಪ್ಪ ಪೂಜಾರಿ ಒಳಗೊಂಡ ಕಾಂಗ್ರೆಸ್ ತಂಡ ಬೆಂಬಲ ಸೂಚಿಸಿ, ಹೋರಾಟಕ್ಕೆ ಸಾಥ್ ನೀಡಿತು.
ಈ ಸಂದರ್ಭ ಮಾತನಾಡಿದ ರೈ, ಹಿಂದಿನ ಗುತ್ತಿಗೆದಾರರಿದ್ದಾಗ ಮೀಟರ್ ರೀಡರ್ ಗಳಿಗೆ ಸರಿಯಾದ ಸೌಲಭ್ಯ ದೊರಕುತ್ತಿತ್ತು. ಈಗ ಏಕಾಏಕಿ ಸಂಬಳ ಕಡಿತ ಹಾಗೂ ಕೆಲಸದಿಂದ ತೆಗೆದುಹಾಕುವ ವಾತಾವರಣ ನಿರ್ಮಾಣವಾಗಿದ್ದು, ಇದನ್ನು ಆಡಳಿತ ಬಗೆಹರಿಸಬೇಕು, ಸಂಕಷ್ಟದ ಕಾಲದಲ್ಲಿ ಮೀಟರ್ ರೀಡರ್ ಗಳ ಸಮಸ್ಯೆಗೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ಬಂಟ್ವಾಳ ನಗರ ಠಾಣಾ ಪೊಲೀಸರು ಎಸ್.ಐ. ಅವಿನಾಶ್, ಕಲೈಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಿದ್ದರು.