ಸರ್ವ ಧರ್ಮಗಳ ಜನರೊಂದಿಗೆ ಸಾಮರಸ್ಯದ ಕೊಂಡಿಯಾಗಿದ್ದ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಗ್ರಾಮೀಣ ಪ್ರದೇಶವಾದ ತುಂಬೆ ಗ್ರಾಮದ ಅಭಿವೃದ್ಧಿ ಕುರಿತು ಅತೀವ ಒಲವು ಹೊಂದಿದ್ದರು. ತನ್ನ ಉದ್ಯಮದ ಜೊತೆಗೆ ಬಡವರು, ಸಮಾಜದ ಬಗ್ಗೆ ಚಿಂತಿಸುತ್ತಿದ್ದ ಅವರು ಅದಕ್ಕಾಗಿ ನೆರವು ನೀಡುವ ತುಡಿತ ಹೊಂದಿದ್ದರು ಎಂದು ತುಂಬೆ ಕಾಲೇಜಿನ ಸಂಚಾಲಕ, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕಾಧ್ಯಕ್ಷ ಬಸ್ತಿ ವಾಮನ ಶೆಣೈ ಹೇಳಿದರು.
ಇತ್ತೀಚೆಗೆ ನಿಧನರಾದ ಬಿ.ಎ. ಗ್ರೂಪ್ ತುಂಬೆ ಹಾಗೂ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ತುಂಬೆ ಸ್ಥಾಪಕರಾದ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ತುಂಬೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1964ರಿಂದ ಅಹ್ಮದ್ ಹಾಜಿ ಮತ್ತು ನನ್ನ ನಡುವೆ ಸ್ನೇಹ ಸಂಬಂಧವಿದೆ. ತುಂಬೆಯ ಅಭಿವೃದ್ಧಿಯ ಕನಸು ಕಾಣುತ್ತಿದ್ದ ಅಹ್ಮದ್ ಹಾಜಿ ಗ್ರಾಮೀಣ ಮಕ್ಕಳಿಗೆ ಉತ್ತಮ ದರ್ಜೆಯ ಶಿಕ್ಷಣ ಸಿಗುವಂತಾಗಲು ತುಂಬೆಯಲ್ಲಿ ತೆರೆದ ಶಾಲಾ, ಕಾಲೇಜು ಶೈಕ್ಷಣಿಕವಾಗಿ ತುಂಬೆಯ ಚಿತ್ರಣವನ್ನೇ ಬದಲಾಯಿಸಿದೆ. ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದ ಅಹ್ಮದ್ ಹಾಜಿ ಅವರು ಆದರ್ಶದ ಜೀವನವನ್ನು ನಡೆಸಿದ್ದಾರೆ. ಇತರ ಧರ್ಮಗಳು, ಧರ್ಮ ಗ್ರಂಥಗಳ ಅದ್ಯಯನ ಕೂಡಾ ಮಾಡುತ್ತಿದ್ದರು. ಅವರಂತಹ ಸ್ನೇಹಿತ ಸಿಕ್ಕಿರುವುದು ತನ್ನ ಪುಣ್ಯವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಓರ್ವ ಉದ್ಯಮಿಯಾಗಿ ಗುರುತಿಸುವುದಕ್ಕಿಂತ ಹೆಚ್ಚಾಗಿ ಓರ್ವ ನಿಸ್ವಾರ್ಥ ಸಮಾಜ ಸೇವಕರಾಗಿ ಗುರುತಿಸಿದ್ದಾರೆ. ಸಮುದಾಯ, ಸಮಾಜದ ಬಗ್ಗೆ ನಿರಂತರ ಕಳಕಳಿ ಹೊಂದಿದ್ದ ಅವರು ಸಾಮಾಜಿಕ ನ್ಯಾಯವನ್ನು ಜೀವನುದ್ದಕ್ಕೂ ಅಳವಡಿಸಿದ್ದ ನಾಯಕರಾಗಿದ್ದರು ಎಂದು ಹೇಳಿದರು.
ಯೆನೆಪೊಯ ಯುನಿವರ್ಸಿಟಿಯ ಚಾನ್ಸಿಲರ್ ಅಬ್ದುಲ್ಲಾ ಕುಂಞಿ ಮಾತನಾಡಿ, ನಮ್ಮ ಬಾವ ಬಿ.ಅಹ್ಮದ್ ಹಾಜಿ ನಿಧನ ನಮ್ಮ ಕುಟುಂಬ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಕುಟುಂಬದ ಹಿರಿಯರೂ, ಮಾರ್ಗದರ್ಶಕರೂ ಅಗಿದ್ದ ಅವರು ಮನುಷ್ಯತ್ವಕ್ಕೆ ಬೆಲೆ ಕಟ್ಟುತ್ತಿದ್ದ ಮಹಾನ್ ಮಾನವತಾವಾದಿ ಆಗಿದ್ದರು ಎಂದು ಹೇಳಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ತನ್ನ ಶಾಶ್ವತ ಹೆಸರನ್ನು ಶಾಶ್ವತವಾಗಿ ಉಳಿಸಿ ನಮ್ಮನ್ನು ಅಗಲಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ಅವರ ಜೀವನ ಇಡೀ ಯುವ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಅಹ್ಮದ್ ಹಾಜಿ ಅವರ ಪುತ್ರ ಸಲಾಂ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಎಸ್.ಡಿ.ಪಿ.ಐ. ಕರ್ನಾಟಕ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾತನಾಡಿದರು. ಅಹ್ಮದ್ ಹಾಜಿ ಅವರ ಪುತ್ರರಾದ ಗಲ್ಫ್ ಯುನಿವರ್ಸಿಟಿ ಸಂಸ್ಥಾಪಕ ತುಂಬೆ ಮೊಯ್ದಿನ್, ಬಿ.ಎಂ. ಅಶ್ರಫ್ ಉಪಸ್ಥಿತರಿದ್ದರು.
ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಂಬೆ ಶಾಲಾ ವಿದ್ಯಾರ್ಥಿ ಅಫ್ನಾನ್ ಕಿರಾಅತ್ ಪಠಿಸಿದರು. ಉಪನ್ಯಾಸಕ ದಿನೇಶ್ ಶೆಟ್ಟಿ ಧನ್ಯವಾದಗೈದರು. ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮೌನ ಪ್ರಾಥನೆ ಸಲ್ಲಿಸಲಾಯಿತು.