ಮೂತ್ರಶಾಸ್ತ್ರ ಕ್ಷೇತ್ರದ ತಜ್ಞವೈದ್ಯರಾದ ಡಾ.ವಿ.ಎನ್.ಭಟ್ ಮುಳಿಯಾಲ (79) ಅವರು ನಿಧನ ಹೊಂದಿದ್ದಾರೆ. ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಅಸುನೀಗಿದ್ದಾರೆ.
ಡಾ.ವಿಶ್ವನಾಥ ನಾರಾಯಣ ಭಟ್ ಅವರು ಮೂಲತಃ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಮುಳಿಯಾಲದವರು. ಕೃಷ್ಣ ಭಟ್ ಹಾಗೂ ಸಾವಿತ್ರಿ ಅಮ್ಮನವರ ಹಿರಿಯ ಪುತ್ರರಾದ ಡಾ.ವಿಶ್ವನಾಥ ನಾರಾಯಣ ಭಟ್ ಅವರು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನಲ್ಲಿ ಮೂತ್ರಶಾಸ್ತ್ರ ವಿಭಾಗ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು. ಬಳಿಕ ಮಂಗಳೂರಿನ ಮೆಡಿಕಲ್ ಚೇಂಬರ್ಸ್ ಹಾಗೂ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಮೂತ್ರಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಅವರು ವೈದ್ಯ ಸೇವೆಯಿಂದ ಸಂಪೂರ್ಣ ನಿವೃತ್ತರಾಗಿದ್ದರು.
ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಿಎಸ್‌ಸಿ ವಿದ್ಯಾಭ್ಯಾಸ ಪೂರೈಸಿದ್ದ ವಿ.ಎನ್.ಭಟ್ ಬಳಿಕ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಭ್ಯಸಿಸಿದ್ದರು. ತದನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್ ಜನರಲ್ ಸರ್ಜರಿ ಹಾಗೂ ಪಿಜಿಐ ಚಂಡೀಗಢದಲ್ಲಿ ಎಂಸಿಎಚ್ ಯೂರೋಲಜಿ ವ್ಯಾಸಂಗ ಪೂರೈಸಿದ್ದರು. ಬಳಿಕ ಕೇರಳ ಮೆಡಿಕಲ್ ಕಾಲೇಜ್ ಸರ್ವೀಸ್‌ನಲ್ಲಿ ವೈದ್ಯಕೀಯ ಸೇವೆ ಆರಂಭಿಸಿದ್ದರು. ನಂತರ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಸೇರಿಕೊಂಡ ಅವರು ಅಲ್ಲೇ ಮೂತ್ರಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ನಿವೃತ್ತರಾದರು.
ತಮ್ಮ ವೃತ್ತಿಜೀವನದಲ್ಲಿ ಡಾ.ವಿ.ಎನ್.ಭಟ್ ಅವರು ಹಲವು ಸಾಧನೆಗಳನ್ನು ಮಾಡಿದ್ದರು. ಎಂಡೋಸ್ಕೋಪಿಕ್ ಯೂರೋಲಜಿ ಕಾರ್ಯವನ್ನು ಭಾರತದಲ್ಲೇ ಪ್ರಥಮವಾಗಿ ಮಾಡಿದ ಹೆಗ್ಗಳಿಕೆ ಅವರದ್ದಾಗಿದೆ. ತಿರುವಾಂಕೂರಿನಲ್ಲಿ ಟರ್ಪ್ ಸರ್ಜರಿ ನಡೆಸಿದ ಪ್ರಥಮ ವ್ಯಕ್ತಿ ಇವರಾಗಿದ್ದರು.ಪುತ್ರ ಡಾ.ರಾಜೇಶ್ ಕೃಷ್ಣ, ಸೊಸೆ ಡಾ.ಗಂಗಾರತ್ನ ಕೃಷ್ಣ, ಪುತ್ರಿ ಡಾ.ವಿಂಧ್ಯಾ ಸಾವಿತ್ರಿ, ಮೊಮ್ಮಕ್ಕಳು ಸಹಿತ ಅಪಾರ ಬಂಧುವರ್ಗವನ್ನು ಅವರು ಅಗಲಿದ್ದಾರೆ.