ಬಂಟ್ವಾಳ: ಮೇಲ್ಕಾರಿನ ಎಂ.ಎಚ್.ಹೈಟ್ಸ್ ನ ಕಟ್ಟಡದಲ್ಲಿ ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಕಾರ್ಯಾರಂಭ ಮಾಡಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಂಘವನ್ನು ಶುಕ್ರವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದ ಹೆಗ್ಗಳಿಕೆ ಜಿಲ್ಲೆಗಿದ್ದು, ಅನುಭವಿ, ಹಿರಿಯರ ಮಾರ್ಗದರ್ಶನದೊಂದಿಗೆ ಸಂಘ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ವಿಧಾನಪರಿಷತ್ತು ಸದಸ್ಯ ಪ್ರತಾಪಸಿಂಹ ನಾಯಕ್, ಎಲ್ಲ ವರ್ಗದ ಜನರಿಗೆ ಸಂಘ ನೆರವಾಗಲಿ ಎಂದು ಶುಭ ಹಾರೈಸಿದರು.
ಗಣಕಯಂತ್ರವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಭವಿಷ್ಯದ ಗುರಿಯನ್ನಿರಿಸಿಕೊಂಡು ಸಂಘ ಮುನ್ನಡೆದರೆ ಯಶಸ್ಸು ಖಚಿತ, ಜಿಲ್ಲೆಯಲ್ಲಿ ಹಲವು ಸಹಕಾರ ಸಂಘಗಳು ಪ್ರಗತಿ ಕಂಡಿದ್ದು, ಸಹಕಾರಿ ಸಂಘಗಳ ಮೇಲೆ ಜನರು ವಿಶ್ವಾಸವನ್ನಿಟ್ಟದ್ದು ಇದಕ್ಕೆ ಸಾಕ್ಷಿ ಎಂದರು.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಎಂ.ಎಚ್. ಹೈಟ್ಸ್ ಮಾಲೀಕ ಹಾಜಿ ಮಹಮ್ಮದ್ ಇಕ್ಬಾಲ್, ಸಹಕಾರಿ ಸಂಘಗಳ ಅಧಿಕಾರಿ ಸುಕನ್ಯಾ ಇದ್ದರು. ಸಂಘದ ಪ್ರವರ್ತಕರಾದ ಜಯಾನಂದ ಪೆರಾಜೆ, ಮುರಳೀಧರ ರಾವ್, ಜಯರಾಮ ಪೂಜಾರಿ, ಶಾಂತಾ ಪುತ್ತೂರು, ರಮಾ ಎಸ್. ಭಂಡಾರಿ, ಅನಂತ ಪ್ರಭು, ಸುದರ್ಶನ ಮಯ್ಯ, ವೇದವ್ಯಾಸ ರಾಮಕುಂಜ, ಪಿ.ಜಯರಾಮ ಶೇಖ, ಕೈಯೂರು ಈಶ್ವರ ಭಟ್, ಪ್ರವೀಣ್ ಚಂದ್ರ, ಅನಿಲ್ ಕುಮಾರ್ ಇದ್ದರು. ಸಂಘದ ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ಸ್ವಾಗತಿಸಿ, ಸಂಘದ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಪ್ರವರ್ತಕ ಜಯಾನಂದ ಪೆರಾಜೆ ವಂದಿಸಿದರು. ಶಾಂತಾ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.