ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ, ಜಕ್ರಿಬೆಟ್ಟು ರೇಚಕ ಸ್ಥಾವರದಲ್ಲಿನ ತಾಂತ್ರಿಕ ತೊಂದರೆಗಳನ್ನು ದುರಸ್ತಿಪಡಿಸಿ ಯೋಜನೆಯ ಬಾಕಿ ಕಾಮಗಾರಿಗಳನ್ನು ಮುಂದಿನ 1 ತಿಂಗಳಲ್ಲಿ ಮುಗಿಸಿ ಪೂರ್ಣ ಯೋಜನೆಯನ್ನು ಪುರಸಭೆಗೆ ಹಸ್ತಾಂತರಿಸುವಂತೆ ಹಾಗೂ ನಂತರ ಯೋಜನೆಯ ಪೂರ್ತಿ ನಿರ್ವಹಣೆಯನ್ನು ಪುರಸಭೆ ನಿರ್ವಹಿಸುವಂತೆ ಒಳಚರಂಡಿ ಮಂಡಳಿ ಮತ್ತು ಬಂಟ್ವಾಳ ಪುರಸಭೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಅಗಸ್ಟ್ 11 ರಂದು ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಶಾಸಕ ರಾಜೇಶ್ ನಾಯ್ಕ್ ರವರು ಜಕ್ರಿಬೆಟ್ಟು ರೇಚಕ ಸ್ಥಾವರಕ್ಕೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಯೋಜನೆಯ ಕೆಲವೊಂದು ಲೋಪದೋಷಗಳನ್ನು ಗಮನಿಸಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರ ಮೂಲಕ ನಿರ್ವಹಿಸಲಾದ ಯೋಜನೆಯನ್ನು ಪುರಸಭೆಗೆ ಹಸ್ತಾಂತರಿಸದಿರುವುದು ಮತ್ತು ನಿರ್ವಹಣೆಯ ಬಗ್ಗೆ ಇರುವ ಗೊಂದಲ ಪರಿಹಾರಕ್ಕೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು.
ಅದರಂತೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ವಿಭಾಗ ಸಹಾಯಕ ಆಯುಕ್ತ ಮದನ್, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಸಹಾಯಕ ಅಭಿಯಂತರರಾದ ಶೋಭಲಕ್ಷ್ಮಿ, ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಅಭಿಯಂತರ ಡೊಮಿನಿಕ್ ಡಿ’ಮೆಲ್ಲೊ ಜೊತೆ ಜಕ್ರಿಬೆಟ್ಟು ರೇಚಕ ಸ್ಥಾವರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಈ ಯೋಜನೆಯ 90 ಕಿ.ಮೀ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು ಬಾಕಿ ಇರುವ ಸುಮಾರು 75 ಕಿ.ಮೀ ಪೈಪ್ ಲೈನ್ ವಿಸ್ತರಣೆಗೆ ಈಗಾಗಲೇ ರೂ.40 ಕೋಟಿ ಅನುದಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾತಿ ಹಂತದಲ್ಲಿದೆ ಎಂದು ತಿಳಿಸಿದರು. ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ ಭಟ್ ಉಪಸ್ಥಿತರಿದ್ದರು.