ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ವಠಾರದಲ್ಲಿ ಸರಳ ಗಣೇಶೋತ್ಸವವನ್ನು ಈ ಬಾರಿ ಸರ್ಕಾರದ ನಿಯಮಾವಳಿ ಪ್ರಕಾರ ಆಚರಿಸಲಾಗುತ್ತದೆ. ಇದು ಇಲ್ಲಿ ಆಚರಿಸುವ 41ನೇ ವರ್ಷದ ಉತ್ಸವ. ಶನಿವಾರ ಬೆಳಗ್ಗೆ 9.30 ಕ್ಕೆ ಬಂಟ್ವಾಳ ಶ್ರೀ ಸೀತಾರಾಮ ದೇವಸ್ಥಾನದಿಂದ ಗಣೇಶನ ಮೂರ್ತಿಯನ್ನು ತಂದು ಬಿ ಸಿ ರೋಡು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಇರಲಿದ್ದು, ಸಂಜೆ 4.30 ಕ್ಕೆ ವಿಸರ್ಜನೆ ಪೂಜೆ ನಡೆಯಲಿದೆ, ನಂತರ ಶ್ರೀ ವೆಂಕಟ್ರಮಣ ಸ್ವಾಮಿ ದೇವಾಲಯದ ಬಳಿಯ ನೇತ್ರಾವತಿ ನದಿಯಲ್ಲಿ ಜಲಾಧಿವಾಸ ಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದ್ದು, ಭಕ್ತರು ಸಾಮಾಜಿಕ ಅಂತರ ಕಾಪಾಡಿ ಸಹಕರಿಸಬೇಕು ಎಂದು ಹೇಳಿದೆ. ಇದೇ ರೀತಿ ತಾಲೂಕಿನಲ್ಲಿ ಈ ಬಾರಿ ಸರ್ಕಾರದ ನಿಯಮಾವಳಿ ಅನುಸಾರ ಸರಳವಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಗಣೇಶೋತ್ಸವ ಹಿನ್ನೆಲೆಯಲ್ಲಿ ಮನೆಮನೆಗಳಲ್ಲಿ ಉತ್ಸವ ಆಚರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಕಳೆದ 26 ವರ್ಷಗಳಿಂದ ವಿಗ್ರಹಗಳ ಸಿದ್ಧತಾ ಕಾರ್ಯ ನಡೆಸುತ್ತಿರುವ ಬಸ್ತಿ ಸದಾಶಿವ ಶೆಣೈ ಮತ್ತು 35 ವರ್ಷಗಳಿಂದ ವಿಗ್ರಹ ತಯಾರಿ ನಡೆಸುತ್ತಿರುವ ಶಂಕರನಾರಾಯಣ ಹೊಳ್ಳ ಈ ಬಾರಿ 2 ಅಡಿಗಳ ಮೂರ್ತಿಯನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಒಟ್ಟಾರೆಯಾಗಿ ಸುಮಾರು 150ರಷ್ಟು ಮೂರ್ತಿಗಳು ಸಿದ್ಧಗೊಂಡು ಅಂತಿಮ ಸ್ಪರ್ಶಕ್ಕೆ ಕಾಯುತ್ತಿವೆ. ಸರ್ಕಾರದ ಸುತ್ತೋಲೆಯಲ್ಲಿ ಇರುವ ನಿಯಮದಂತೆ ತಾಲೂಕಿನಲ್ಲಿ ಸುಮಾರು 45 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗಳು ಇದ್ದರೂ ಸಾಮಾಜಿಕ ಅಂತರ ಕಡ್ಡಾಯ.