ಪ್ರಕೃತಿಗೆ ವಿರುದ್ಧವಾಗಿ ಮಾನವ ಬದುಕಿದ ಪರಿಣಾಮ ಇಡೀ ಜೀವಸಂಕುಲ ವಿನಾಶದೆಡೆ ಸಾಗುತ್ತಿದೆ. ಮತ್ತೆ ಪ್ರಕೃತಿಗೆ ಮುಖಮಾಡಿ ಬದುಕುವುದೇ ಮಾನವಕುಲದ ಉಳಿವಿಗೆ ಇರುವ ಏಕೈಕ ಮಾರ್ಗವಾಗಿದೆ ಎಂದು ಪತ್ರಕರ್ತ ಗೋಪಾಲ ಅಂಚನ್ ಹೇಳಿದರು.
ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ ವತಿಯಿಂದ ಸೋರ್ನಾಡು ಲಯನ್ಸ್ ಕಚೇರಿಯಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರಕೃತಿ ಮಾನವನ ಆಹಾರ, ಆರೋಗ್ಯ, ನೆಮ್ಮದಿಗಾಗಿ ಎಲ್ಲವನ್ನೂ ನೀಡಿದೆ. ಆದರೆ ಮನುಷ್ಯರು ಆಧುನಿಕತೆ ಮತ್ತು ಆಡಂಬರದ ಭರಾಟೆಯಲ್ಲಿ ಪ್ರಕೃತಿಗೆ ವಿರುದ್ಧವಾಗಿ ಜೀವನಶೈಲಿಯನ್ನು ರೂಪಿಸಿಕೊಂಡ ಪರಿಣಾಮ ಇಂದು ಸಮಸ್ಯೆಗಳು ತಾಂಡವವಾಡುತ್ತಿದೆ. ಆಟಿಯ ಕಟ್ಟುಪಾಡುಗಳು ನಮ್ಮ ಹಿರಿಯರ ಪ್ರಕೃತಿಯೊಡನೆಯ ಸಹಜ ಬದುಕಿನ ಸಂಕೇತವಾಗಿ ನಮಗೆ ಮುಖಾಮುಖಿಯಾಗುತ್ತಿದೆ ಎಂದು ಅವರು ಹೇಳಿದರು.
ಲಯನ್ಸ್ ಅಧ್ಯಕ್ಷ ಜೋನ್ ಸಿರಿಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಿನೀತ್ ರೊಡ್ರಿಗಸ್, ಕೋಶಾಧಿಕಾರಿ ಎವ್ಜಿನ್ ಲೋಬೋ, ಜಿಲ್ಲಾ ಕೋಡಿನೇಟರ್ ಹ್ಯೂಬರ್ಟ್ ಲೋಬೋ, ನಿಕಟಪೂರ್ವಾಧ್ಯಕ್ಷ ಲಿಗೋರಿ ಲೋಬೋ, ಪಿ.ಜೆ.ರೋಡ್ರಿಗಸ್ ಮೊದಲಾದವರಿದ್ದರು. ಲಯನ್ಸ್ ಸದಸ್ಯರು ತಯಾರಿಸಿದ ಆಟಿಯ ತಿಂಡಿತಿನಸುಗಳೊಂದಿಗೆ ಸಹಭೋಜನ ನಡೆಯಿತು.