ಬಂಟ್ವಾಳ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಪೂರಕ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಜೊತೆ ಕೇಂದ್ರಕ್ಕೆ ಆಗಮಿಸಿದ ಸಚಿವರಿಗೆ, ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮತ್ತು ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಈ ವೇಳೆ ಆರ್ಟ್ ಗ್ಯಾಲರಿ, ತುಳು ಬದುಕು ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಅಗತ್ಯಗಳಿಗೆ ಬೇಕಾದ ಗ್ರಂಥಾಲಯದ ಕುರಿತು ಮಾಹಿತಿ ನೀಡಿದರು. ಈ ವೇಳೆ ರಾಣಿ ಅಬ್ಬಕ್ಕ ಕುರಿತ ಸಂಶೋಧನಾತ್ಮಕ ಪುಸ್ತಕ ಪ್ರಕಟಣೆಗೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವುದೆಂದು ಘೋಷಿಸಲಾದ 10 ಲಕ್ಷ ರೂ ಮೊತ್ತ ಮಂಜೂರಾಗಿ ಎರಡು ವರ್ಷಗಳಾಗಿದ್ದರೂ ಬಾರದೆ ಇದ್ದ ವಿಚಾರವನ್ನು ಸಚಿವರ ಗಮನಕ್ಕೆ ತರಲಾಯಿತು. ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಈ ಮಂಜೂರುಗೊಳಿಸಿದ ಹಣವನ್ನು ಕೇಂದ್ರಕ್ಕೆ ನ್ಯಾಯಯುತವಾಗಿ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ಇದೇ ವೇಳೆ ಕೇಂದ್ರದ ನಿರ್ವಹಣಾ ವೆಚ್ಚಕ್ಕೆ ಸಂಸ್ಕೃತಿ ಇಲಾಖೆಯಿಂದ ಅವಕಾಶ ಇದೆಯೇ ಎಂದು ಪರಿಶೀಲಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಸಂಪರ್ಕಿಸಿ ಮಾತನಾಡಲಾಗುವುದು ಎಂದು ಹೇಳಿದ ಸಚಿವರು, ತುಕಾರಾಮ ಪೂಜಾರಿ ದಂಪತಿಯ ಶ್ರಮವನ್ನು ಶ್ಲಾಘಿಸಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಸುಲೋಚನಾ ಭಟ್, ರಾಮದಾಸ ಬಂಟ್ವಾಳ, ಪ್ರಕಾಶ್ ಅಂಚನ್, ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ಕಾರ್ತಿಕ್ ಬಲ್ಲಾಳ್, ಹರಿಪ್ರಸಾದ್, ದಾಮೋದರ ಸಂಚಯಗಿರಿ ಈ ಸಂದರ್ಭ ಉಪಸ್ಥಿತರಿದ್ದರು.