ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನ ಪ್ರಮುಖ ರಸ್ತೆಯಲ್ಲಿ ಖಾಸಗಿ ಬಸ್ ತಂಗುದಾಣದವರೆಗಿನ ರಸ್ತೆ ಹೊಂಡದಿಂದ ಕೂಡಿದ್ದು, ಶಾಶ್ವತ ಪರಿಹಾರಕ್ಕಾಗಿ ಪ್ರಯಾಣಿಕರು ಕಾಯುತ್ತಿದ್ದಾರೆ ಎಂಬ ಆಗಸ್ಟ್ 11ರಂದು ಪ್ರಸಾರವಾದ ಬಂಟ್ವಾಳನ್ಯೂಸ್ ವರದಿಗೆ ಸ್ಪಂದನೆ ದೊರಕಿದೆ, ಶುಕ್ರವಾರ ಹೊಂಡಗಳು ಇದ್ದ ಜಾಗದಲ್ಲಿ ತೇಪೆ ಹಚ್ಚುವ ಕಾರ್ಯ ನಡೆಯಿತು. ಬಂಟ್ವಾಳನ್ಯೂಸ್ ನಲ್ಲಿ ವರದಿಯ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿರಿ
ಆದರೆ ಆಗಾಗ್ಗೆ ಇಲ್ಲಿ ತೇಪೆ ಕಾರ್ಯವನ್ನು ಸ್ಥಳೀಯರು ಮಾಡುತ್ತಿದ್ದರೂ ಮತ್ತೆ ಕಿತ್ತು ಹೋಗುವ ಹೊಂಡಗಳು ಸವಾಲಾಗಿ ಪರಿಣಮಿಸಿವೆ. ಹಲವು ವರ್ಷಗಳಿಂದ ಅದೇ ಜಾಗದಲ್ಲಿ ಹೊಂಡಗಳು ಉದ್ಭವವಾಗುತ್ತಿರುವುದು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಕೆಣಕುತ್ತಿವೆ. ದ್ವಿಚಕ್ರ, ಘನ ವಾಹನಗಳ ಸುಗಮ ಸಂಚಾರಕ್ಕೂ ಇದು ತೊಡಕಾಗಿದೆ. ಸಾಲದು ಎಂಬಂತೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನಿಂತು ಕೆರೆಯಂತಾಗುತ್ತಿದ್ದು, ವಾಹನಗಳ ಓಡಾಟಕ್ಕೆ ಪ್ರಯಾಣಿಕರು ಒದ್ದೆಯಾಗಬೇಕಾಗುತ್ತದೆ. ಧಾರಾಕಾರ ಮಳೆಯ ಸಂದರ್ಭ ಮೇಲ್ಸ್ ತುವೆಯ ಮೇಲ್ಬಾಗದಿಂದ ನೀರು ರಸ್ತೆಗೆ ಸುರಿದು ಅಭಿಷೇಕ ಮಾಡುವಂತೆ ಭಾಸವಾಗುತ್ತಿದೆ. ಇದರ ಮೂಲ ಸಮಸ್ಯೆ ಕಂಡುಹಿಡಿದು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.