ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ಹಿಂಸಾಚಾರದ ಘಟನೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಬಂಟ್ವಾಳ ಪ್ರಖಂಡ ವತಿಯಿಂದ ಗುರುವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಯಿತು.
ಬೆಂಗಳೂರಿನಲ್ಲಿ ನಡೆದ ದೊಂಬಿ, ಬೆಂಕಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಅಮಾಯಕರಿಗೆ ತೊಂದರೆ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧ್ವಂಸಕ್ಕೆ ಯತ್ನಿಸಿದ ಕೃತ್ಯವನ್ನು ಖಂಡಿಸಿ, ಸರಕಾರವು ಈ ಕುರಿತು ಸೂಕ್ತ ಕ್ರಮಕೈಗೊಂಡು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಅವರ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ವಿಹಿಂಪ ಜಿಲ್ಲಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಘಟನೆಯು ಪೂರ್ವಯೋಜಿತ ಕೃತ್ಯವಾಗಿದ್ದು, ಘಟನೆಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಹೀಗಾಗಿ ಘಟನೆಯನ್ನು ಎನ್‌ಐಎ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಜರಂಗ ದಳ ಜಿಲ್ಲಾ ಸಹಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ತಾಲೂಕು ಪ್ರಮುಖರಾದ ಸುರೇಶ್ ಬೆಂಜನಪದವು, ಶಿವಪ್ರಸಾದ್ ತುಂಬೆ, ದೀಪಕ್ ಬಂಟ್ವಾಳ, ಭುವಿತ್ ಬಂಟ್ವಾಳ, ಅಭಿನ್ ರೈ, ಪ್ರಸಾದ್ ಬೆಂಜನಪದವು, ಅಕೇಶ್ ರಾಮನಗರ ಮೊದಲಾದವರಿದ್ದರು.